
ದಕ್ಷಿಣ ಕನ್ನಡದಲ್ಲಿ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆಯಾಗಿದ್ದು, ಬಿಸಿಲ ತಾಪದಿಂದ ಕಂಗೆಟ್ಟ ಜನತೆಗೆ ತಂಪಿನ ಅನುಭವವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಸುಳ್ಯ, ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ವಿವಿದೆಡೆ ಭಾರೀ ಮಳೆಯಾಗಿದೆ. ಸುಳ್ಯ, ಪುತ್ತೂರು ತಾಲೂಕಿನಾದ್ಯಂತ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸುಳ್ಯದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ ಎಂದು ವರದಿಯಾಗಿದೆ. ಪುತ್ತೂರು ತಾಲೂಕಿನಲ್ಲೂ ತುಂತುರು ಮಳೆಯಾಗಿದೆ. ಮೋಡ ಕವಿದ ವಾತಾವರಣದಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಬಿಸಿಲಿನ ತಾಪಮಾನ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿದೆ. ಹವಮಾನ ಇಲಾಖೆ ಮುಂದಿನ ಎರಡು ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಳ್ತಂಗಡಿ..
ತಾಲೂಕಿನೆಲ್ಲೆಡೆ ಬುಧವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಮುಂಡಾಜೆ, ಕಕ್ಕಿಂಜೆ, ಧರ್ಮಸ್ಥಳ, ಉಜಿರೆ, ನಡ, ನಿಡಿಗಲ್, ಪಣಕಜೆ, ಅಳದಂಗಡಿ, ಧರ್ಮಸ್ಥಳ ಸಹಿತ
ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು ಮಳೆ ಆರಂಭಗೊಂಡಿದೆ. ಉತ್ತಮ ಮಳೆಯಿಂದಾಗಿ ವಾತಾವರಣ ತಂಪಾಗಿದೆ.
ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ಕೆಲಸ ಕಾರ್ಯಗಳಿಗೆ ಸಮಸ್ಯೆ ಉಂಟಾಗಿದೆ. ಕಕ್ಕಿಂಜೆಯಲ್ಲಿ ಮಳೆ ತೀವ್ರವಾದ ಪರಿಣಾಮ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿರುವ ದೃಶ್ಯ ಕಂಡುಬಂತು. ಕಳೆದ ಎರಡು ವಾರಗಳಿಂದ ತಾಲೂಕಿನಲ್ಲಿ ಬಿಸಿಲಿನ ವಾತಾವರಣ ಕಂಡು ದಿದ್ದು ಇಂದಿನ ಮಳೆ ವಾತಾವರಣವನ್ನು ತಂಪುಗೊಳಿಸಿದೆ.