
ಕಟೀಲು ದೇವಸ್ಥಾನದಲ್ಲಿ ತೂಟೆದಾರ ಸೇವೆ
ಮಂಗಳೂರು: ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಎರಡು ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಅಗ್ನಿಕೇಳಿ ಕಾದಾಟ ( ತೂಟೆದಾರ ಸೇವೆ) ನಡೆಯಿತು. ಕಟೀಲು ದುರ್ಗಾಪರಮೇಶ್ವರಿಯ ಜಾತ್ರೆ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಹರಕೆ ತೀರಿಸಲು ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಬೆಂಕಿ ಆಟವನ್ನು ಆಡುತ್ತಾರೆ. ಕಟೀಲು ಶ್ರೀ ದುರ್ಗೆಯ ಜಾತ್ರೆಯ ಕೊನೆಯ ದಿನ ಈ ಆಚರಣೆ ನಡೆಯುತ್ತದೆ. ದುಷ್ಟಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತೃಪ್ತಿಪಡಿಸಲು ಬೆಂಕಿ ಆಟ ಆಡಲಾಗುತ್ತದೆ.
ಕಟೀಲು ದೇಗುಲದಲ್ಲಿ ಕಳೆದ ನೂರಾರು ವರ್ಷಗಳಿಂದ ಬೆಂಕಿಯ ಆಟ ನಡೆದುಕೊಂಡು ಬರುತ್ತಿದೆ. ಹೀಗಿದ್ದರೂ ಇದುವರೆಗೂ ಯಾವುದೇ ಬೆಂಕಿ ಅನಾಹುತ, ಭಕ್ತಾಧಿಗಳು ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.
ಮುಂಜಾನೆ ಅಜಾರು ನಂದಿನಿ ನದಿಯಲ್ಲಿ ಜಳಕದ ಉತ್ಸವದ ಬಳಿಕ ರಕ್ತೇಶ್ವರೀ ಗುಡ್ಡದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರ ತೂಟೆದಾರ (ತೆಂಗಿನ ಗರಿಗಳನ್ನು ಒಟ್ಟಗೂಡಿಸಿ ಕಟ್ಟಿ ಬೆಂಕಿ ಉರಿಸಿ ಪರಸ್ಪರ ಎಸೆಯುವ ಹರಕೆ ಸೇವೆ) ಆರಂಭವಾದ ನಂತರ ರಥಬೀದಿಯಲ್ಲಿ ತೂಟೆದಾರ ನಡೆಯುತ್ತದೆ. ಅದಾದ ಬಳಿಕ ಓಕುಳಿ ಸ್ನಾನ ಹಾಗು ಪ್ರಸಾದ ವಿತರಣೆ ನಡೆಯುತ್ತದೆ.
ಜಳಕದ ಬಲಿ ಸಂದರ್ಭದಲ್ಲಿ ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ, ಚಿನ್ನದ ರಥೋತ್ಸವ, ಧ್ವಜಾವರೋಹಣ, ಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು.
ತೂಟೆದಾರ ಎಂದರೇನು..
ಪೊರಕೆಯಂತೆ ಸುತ್ತಲಾಗಿರುವ ತೆಂಗಿನಗರಿಗಳಿಗೆ ಒಂದು ತುದಿಯಿಂದ ಬೆಂಕಿ ಹಚ್ಚುತ್ತಾರೆ. ಇದಕ್ಕೆ ತುಳುವಿನಲ್ಲಿ ತೂಟೆ ಎನ್ನುತ್ತಾರೆ. ಒಂದೆಡೆ ಅತ್ತೂರು, ಇನ್ನೊಂದೆಡೆ ಕೊಡೆತ್ತೂರು ಮಾಗಣೆಯವರು ನಿಂತು, ಅಗ್ನಿ ಹಚ್ಚಿದ ತೆಂಗಿನಗರಿಗಳ ‘ಪಂಜ’ನ್ನು ಪರಸ್ಪರರ ಮೇಲೆ ಎಸೆಯುತ್ತಾರೆ. ತೂರಿ ಬರುವ ಗರಿಗಳಿಂದ ಉದುರುವ ಬೆಂಕಿಯ ಕಿಡಿಗಳು, ಮೈಮೇಲೆ ಬಿದ್ದರೂ ಈ ಆಟದಲ್ಲಿ ತೊಡಗಿರುವವರಿಗೆ ಏನೂ ಆಗುವುದೇ ಇಲ್ಲ. ಪೈಪೋಟಿಗೆ ಬಿದ್ದವರಂತೆ ಅವರೆಲ್ಲ ಈ ‘ಬೆಂಕಿಯ ಓಕುಳಿ’ಯಲ್ಲಿ ಆಡುತ್ತಾರೆ.
ಯಾರು ಭಾಗಿಯಾಗುವವರು..
ಕೊಡೆತ್ತೂರು ಮತ್ತು ಅತ್ತೂರು ಮಾಗಣೆಗಳು ಕಟೀಲಿಗೆ ಸಂಬಂಧಿಸಿದ ಮಾಗಣೆಗಳು. ಈ ಎರಡೂ ಮಾಗಣೆಗಳ ವ್ಯಾಪ್ತಿಯಲ್ಲಿ 8 ಊರುಗಳು ಬರುತ್ತವೆ. ಈ ಊರುಗಳಲ್ಲಿ ತೂಟೆದಾರ ಸೇವೆ ಮಾಡುವ ಮನೆತನಗಳು ಇವೆ. ವಂಶಪಾರಂಪರ್ಯವಾಗಿ ಅವರು ಈ ಸೇವೆ ಮಾಡುತ್ತಿದ್ದಾರೆ.
ಇದು ಅತ್ಯಂತ ಸಂಪ್ರದಾಯಬದ್ಧ ಹಾಗೂ ನಿಯಮಬದ್ಧವಾಗಿ ನಡೆಯುವ ಧಾರ್ಮಿಕ ಸೇವೆ. ಇಂತಹ ಸೇವೆ ಮಾಡುವ ಮನೆಯವರು ಒಂದು ಮನೆಯಿಂದ ಒಬ್ಬರು ಮಾತ್ರ ಇದರಲ್ಲಿ ಭಾಗವಹಿಸುತ್ತಾರೆ. ಸೂತಕ ಇದ್ದರೆ ಬರುವ ಹಾಗಿಲ್ಲ. ಆ ಮನೆತನದವರ ಬದಲು ಬೇರೆಯವರು ಬರುವಂತೆಯೂ ಇಲ್ಲ. ಹೀಗೆ ಹಲವು ನಿಯಮಗಳಿವೆ. ಇದು ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಸೇವೆಯಾಗಿದೆ.
ಈ ಪದ್ದತಿ ಯಾಕೆ?:
ಕಟೀಲು ದುರ್ಗಾಪರಮೇಶ್ವರಿಗೆ ಅರುಣಾಸುರ ಮರ್ದಿನಿ ಎಂದು ಕರೆಯುವುದೂ ಉಂಟು. ಅರುಣಾಸುರನನ್ನು ಸಂಹರಿಸಿದ ದೇವಿ, ವಿಜಯಶಾಲಿಯಾಗಿ ಮರಳಿದಾಗ ಬೆಂಕಿಯ ಸ್ವಾಗತ ಕೋರಲಾಗಿತ್ತು. ಅದರ ಸ್ಮರಣಾರ್ಥ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ತೂಟೆದಾರ ಸೇವೆ ನಡೆಯುತ್ತದೆ. ಇದು ದುರ್ಗಾಪರಮೇಶ್ವರಿಗೆ ಬಲು ಇಷ್ಟದ ಆಟ ಎಂಬುದು ಪ್ರತೀತಿ.