
ಡಾ. ಆರ್ಯಾ ನಾಯಕರಿಗೆ ಅಂತಾರಾಷ್ಟ್ರೀಯ ಸ್ಟುಡೆಂಟ್ ಮೆರಿಟ್ ಅವಾರ್ಡ್
Saturday, April 12, 2025
ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ. ಆರ್ಯಾ ನಾಯಕ ಅವರಿಗೆ ಶ್ರೀಲಂಕಾ ಮೂಲದ ಪಿಯರ ಘಶಾರ್ಡ್ ಅಕಾಡೆಮಿ, ಪೋಸ್ಟ್ ಗ್ರಾಜುಯೇಟ್ ಸ್ಟೂಡೆಂಟ್ ಮೆರಿಟ್ ಅವಾರ್ಡ್ ನೀಡಿ ಗೌರವಿಸಿದೆ.
ಕಾರವಾರ ಅಂಕೋಲಾ ಶೀಳ್ಯ ಮೂಲದ ಡಾ. ಆರ್ಯಾ ನಾಯಕ ಅವರು ಶ್ರೀಲಂಕಾದಲ್ಲಿ ನಡೆದ ವಿಶ್ವ ದಂತ ವಿಜ್ಞಾನ ಸಮ್ಮೇಳನದಲ್ಲಿ ತಮ್ಮ ವಿಶಿಷ್ಟ ಪ್ರತಿಭೆ ಮತ್ತು ಶ್ರೇಷ್ಠ ಪ್ರಸ್ತುತಿಯನ್ನು ಪ್ರದರ್ಶಿಸಿ, ಮೆರಿಟ್ ಹಾಗೂ ಪ್ರೆಸೆಂಟೇಷನ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಡಾ. ಆರ್ಯಾ ನಾಯಕ ಅವರು ಅಂಕೋಲದ ಶೀಳ್ಯದ ಮಾಣಿ ನಾಯಕ ಹಾಗೂ ಶ್ರೀಮತಿ ಅವರ ಪುತ್ರಿ. ಮಾಣಿ ನಾಯಕ ಅವರು ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಯಾ ನಾಯಕ ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದು, ತಮ್ಮ ಪಿಯುಸಿ ವಿದ್ಯಾಭ್ಯಾಸ ಸಂಧರ್ಭ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲಿಗಳಾಗಿ ಉತ್ತೀರ್ಣಳಾಗಿದ್ದ ಈಕೆ ನಂತರ ಬೆಂಗಳೂರಿನ ರಾಮಯ್ಯ ಡೆಂಟಲ್ ಕಾಲೇಜಿನಲ್ಲಿ 5 ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದರು.
ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಕಳೆದ 15 ವರ್ಷಗಳಲ್ಲಿ ಈ ವಿಭಾಗದಲ್ಲಿ ಯಾವ ವಿದ್ಯಾರ್ಥಿಯೂ ಮಾಡಿರದ ಸಾಧನೆಯನ್ನು ಆರ್ಯಾ ನಾಯಕ ನಿರ್ಮಿಸಿದ್ದಾರೆ.