ವಕ್ಫ್ ಕಾಯ್ದೆ ವಿರೋಧರ ಹೆಸರಿನಲ್ಲಿ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ: ಸೂರಜ್‌ಕುಮಾರ್

ವಕ್ಫ್ ಕಾಯ್ದೆ ವಿರೋಧರ ಹೆಸರಿನಲ್ಲಿ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ: ಸೂರಜ್‌ಕುಮಾರ್


ಮಂಗಳೂರು: ಖಿಲಾಫತ್ ಚಳವಳಿ, ಕಾಶ್ಮೀರದಿಂದ ಪಂಡಿತರನ್ನು ಓಡಿಸಿದ ಸಂದರ್ಭ ಹಿಂದುಗಳ ಮೇಲೆ ನಡೆಸಿದ ದೌರ್ಜನ್ಯದ ಮಾದರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ನೆಪದಲ್ಲಿ ಪ್ರತಿಭಟನೆ ನಡೆಸಿ ಹಿಂದುಗಳನ್ನು ದಮನಿಸಲಾಗುತ್ತಿದೆ. 2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಚಿನ ಭಾಗವಾಗಿ ವಕ್ಫ್ ಕಾಯ್ದೆ ವಿರೋಧರ ಹೆಸರಿನಲ್ಲಿ ದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರ ಪ್ರಮುಖ್ ಸೂರಜ್‌ಕುಮಾರ್ ಹೇಳಿದರು.


ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧದ ನೆಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಹಿಂದುಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿ ವಿಶ್ವಹಿಂದು ಪರಿಷತ್, ಬಜರಂಗದಳ ಮಂಗಳೂರು ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಈ ಹಿಂದಿನ ವಕ್ಫ್ ಕಾನೂನಿನಲ್ಲಿ ನಿರ್ದಿಷ್ಟ ಜಾಗವೊಂದನ್ನು ವಕ್ ಮಂಡಳಿ ತನ್ನ ಜಾಗವೆಂದು ಪ್ರತಿಪಾದಿಸಿದರೆ ಅದನ್ನು ವಕ್ ಟ್ರಿಬ್ಯುನಲ್‌ಗಳಲ್ಲಿ ಮಾತ್ರ ಪ್ರಶ್ನಿಸಬಹುದಿತ್ತು. ತಿದ್ದುಪಡಿ ಕಾಯ್ದೆ ಮೂಲಕ ನ್ಯಾಯಾಲಯದ ಮೊರೆ ಹೋಗುವ ಅವಕಾಶ, ಜಿಲ್ಲಾಧಿಕಾರಿಗೂ ಈ ವಿಚಾರದಲ್ಲಿ ಅಧಿಕಾರ ನೀಡಲಾಗಿದೆ. ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ನಾವು ಯಾವ ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬ ಅರಿವು ಇಲ್ಲ. ಮುಸಲ್ಮಾನರ ವಕ್ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಜತೆಗೆ ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ನೆಪದಲ್ಲಿ ಹಿಂದುಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದರು.

ವಕ್ಫ್ ಆಸ್ತಿಯಿಂದ ಬಡ ಮುಸಲ್ಮಾನರಿಗೆ, ಮಹಿಳೆಯರಿಗೆ ಉಪಯೋಗ ಆಗುತ್ತಿಲ್ಲ. ವಕ್ಫ್ ಮಂಡಳಿಯಿಂದ ಸರಕಾರಕ್ಕೆ ಯಾವುದೇ ತೆರಿಗೆ ಸಲ್ಲಿಕೆ ಆಗುತ್ತಿಲ್ಲ. ಕೇರಳದಲ್ಲಿ ಕ್ರೈಸ್ತರ ಆಸ್ತಿಯನ್ನು ವಕ್ಫ್ ಭೂಮಿ ಎನ್ನಲಾಗುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯವಾಗಿದೆ ಎಂದರು.

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧದ ನೆಪದಲ್ಲಿ ಅಡ್ಯಾರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಸಂದರ್ಭ ಮುಸಲ್ಮಾನರು ಹಿಂದೂಗಳನ್ನು ಹೆದರಿಸಿಲ್ಲ. ಆದರೆ, 50 ಸಾವಿರ ಜನ ಸೇರುತ್ತಾರೆ ಎಂದು ಹೆದ್ದಾರಿ ಬದಿಯಲ್ಲಿದ್ದ ಕೇಸರಿ ಬಂಟಿಂಗ್ಸ್ ತೆಗೆಸಿ ಪೊಲೀಸರೇ ಹಿಂದೂಗಳನ್ನು ಹೆದರಿಸಿದರು. ರಸ್ತೆ ಬಂದ್ ಮಾಡುತ್ತೇವೆ, ವಾಹನ ಸಂಚಾರ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದರು. ಇಂತಹ ಸವಾಲುಗಳನ್ನು ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಹಿಂದೂಗಳು ಏಳುವುದು ತಡವಾಗಿ, ಎದ್ದ ಬಳಿಕ ನೀಡುವ ಪೆಟ್ಟು ಜನ್ಮಜನ್ಮಾಂತರಕ್ಕೆ ನೆನಪಿಟ್ಟುಕೊಳ್ಳಬೇಕು ಎಂದು ಸೂರಜ್‌ಕುಮಾರ್ ಹೇಳಿದರು.

ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಹಿಂದುಗಳು ಬಹುಸಂಖ್ಯಾತರಾಗಿರುವ ದೇಶದಲ್ಲಿ ಹಿಂದುಗಳ ರಕ್ಷಣೆಗೆ ಬೀದಿಗಿಳಿಯಬೇಕಾದ ಸ್ಥಿತಿ ಒದಗಿದೆ ಅಂದರೆ ಪರಿಸ್ಥಿತಿಯ ಗಂಭೀರತೆಯನ್ನು ಹಿಂದುಗಳ ಅರ್ಥಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ರಾಕ್ಷಸೀ ಪ್ರವೃತ್ತಿಯ ಮಮತಾ ಬ್ಯಾನರ್ಜಿ ಅವರ ಆಡಳಿತದಿಂದ ಹಿಂದುಗಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮತಾಂಧರ ಅಟ್ಟಹಾಸ ನಿಲ್ಲಬೇಕಾದ ಗೋಧ್ರಾ ಘಟನೆ ಮರುಕಳಿಸಬೇಕು. ಹಿಂದುಗಳ ಮೇಲೆ ದೌರ್ಜನ್ಯ ನಿಲ್ಲಲು ಹಿಂದುಗಳು ಬಲಿದಾನಕ್ಕೆ ಸಿದ್ದರಾಗಬೇಕು ಎಂದರು.

ಉತ್ತರ ಪ್ರದೇಶದಲ್ಲಿ 40 ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿದ್ದರೂ, ಅಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಯಾವುದೇ ಪ್ರತಿಭಟನೆ ನಡೆದಿಲ್ಲ. ಏಕೆಂದರೆ ಅಲ್ಲಿ ಪ್ರತಿಭಟನೆ ನಡೆಸಿದರೆ ಪರಿಣಾಮ ಎದುರಿಸಬೇಕು ಎಂಬ ಭಯ ಇದೆ ಎಂದರು.

ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಪ್ರಮುಖರಾದ ಶಿವಾನಂದ ಮೆಂಡನ್, ಕೃಷ್ಣಮೂರ್ತಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಕಟೀಲು ದಿನೇಶ ಪೈ, ಸಂಕಪ್ಪ ಭಂಡಾರಿ, ಪ್ರದೀಪ್ ಸರಿಪಳ್ಳ, ಬಜರಂಗದಳ ಮುಖಂಡರಾದ ಭುಜಂಗ ಕುಲಾಲ್, ಪುನೀತ್ ಅತ್ತಾವರ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article