ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯರ ಪಾತ್ರ ಮಹತ್ವದ್ದು: ಡಾ. ವಿಲ್ಮಾ ಡಿಸೋಜಾ

ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯರ ಪಾತ್ರ ಮಹತ್ವದ್ದು: ಡಾ. ವಿಲ್ಮಾ ಡಿಸೋಜಾ


ಮಂಗಳೂರು: ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯರು ಗರ್ಭಿಣಿಯರಿಗೆ ಉತ್ತಮ ಮಾರ್ಗದರ್ಶಕರು ಮತ್ತು ಜಾಗೃತಿ ಮೂಡಿಸುವವರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಆ ನಿಟ್ಟಿನಲ್ಲಿ ಅವರ ಕೊಡುಗೆ ಮಹತ್ತರವಾದುದು ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲೆ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ವಿಲ್ಮಾ ಡಿಸೋಜಾ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಿಶ್ವ ಸೂಲಗಿತ್ತಿ ದಿನಾಚರಣೆ ಅಂಗವಾಗಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮಹಿಳಾ ವೇದಿಕೆ ಮತ್ತು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸಬಹುದಾಗಿದ್ದು, ಅಂತಹ ವೇಳೆ ಸೂಲಗಿತ್ತಿಯರು ಗರ್ಭಿಣಿಯರಿಗೆ ಉತ್ತಮ ಮಾರ್ಗದರ್ಶಕರಾಗಿರುತ್ತಾರೆ. ಇವರ ಸಲಹೆ ಕೇವಲ ಹೆರಿಗೆಗೆ ಮಾತ್ರವೇ ಸಂಬಂಧಿಸಿದುದಾಗಿರುವುದಿಲ್ಲ, ಒಟ್ಟಾರೆ ಮಹಿಳೆಯರ ಆರೋಗ್ಯ ಮತ್ತು ಉತ್ತಮ ಭವಿಷ್ಯದ ದೃಷ್ಟಿಯಿಂದಲೂ ಅಗತ್ಯವಾಗಿರುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನ ಕಾರಣಕ್ಕಾಗಿ ಮಹಿಳೆಯರು ರಕ್ತಹೀನತೆ, ಪಿಸಿಒಡಿಯಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮುಂದಿನ ಪೀಳಿಗೆಗೆ ತಾಯಂದಿರಾಗಲಿರುವ ಬಹುತೇಕ ಹೆಣ್ಣು ಮಕ್ಕಳು ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಹೀಗೆ ತೊಂದರೆ ಅನುಭವಿಸುತ್ತಿರುವ ಹೆಣ್ಣು ಮಕ್ಕಳ ಆರೋಗ್ಯ ಕಾಳಜಿ ಕುರಿತು ಸೂಲಗಿತ್ತಿಯರು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬಹುದಾಗಿದೆ. ಆರಂಭಿಕ ಹಂತದಲ್ಲೇ ಇಂತಹ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಸಮಾಜಕ್ಕೆ ಸೂಲಗಿತ್ತಿಯರ ಕೊಡುಗೆ ಮಹತ್ತರವಾದುದು. ಹಾಗಾಗಿಯೇ, ಇಂದಿಗೂ ಅವರನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ. ಆಧುನಿಕ ಒತ್ತಡದ ಬದುಕಿನಲ್ಲಿ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರುಗಳಾದ ಡಾ. ಅಡ್ಲಿನ್ ಗೊನ್ಸಾಲ್ವ್ಸ್ ಹೋಮಿಯೋಪತಿ ಚಿಕಿತ್ಸಾ ಕ್ರಮದ ಕುರಿತು, ತಮೀಸ್ ಹರಸಿ ಎನ್. ಹೆಣ್ಣು ಮಕ್ಕಳ ನೈರ್ಮಲ್ಯ ಹಾಗೂ ಕರವಸ್ತ್ರ, ಸುನೀತ ಮೆರ್ಲಿನ್ ಫೆನಾಂಡಿಸ್, ಋತುಸ್ರಾವ, ಹಾರ್ಮೋನ್ ಅಸಮತೋಲನ, ಪಿಸಿಒಡಿ, ಪೌಷ್ಠಿಕ ಆಹಾರಕ್ರಮಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಮಹಿಳಾ ವೇದಿಕೆ ಸಂಚಾಲಕಿ ಡಾ. ಭಾರತಿ ಪ್ರಕಾಶ್, ಐಕ್ಯುಎಸಿ ಸಂಚಾಲಕ ಡಾ. ಸಿದ್ದರಾಜು ಎಂ.ಎನ್., ಮಹಿಳಾ ಕೋಶದ ಸಂಚಾಲಕಿ ಪ್ರೊ. ನಾಗರತ್ನ ರಾವ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಇದೇ ವೇಳೆ, ಕಾಲೇಜಿನ ಮಹಿಳಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article