
ಎಪ್ರಿಲ್ 27: ಆಳ್ವಾಸ್‌ನಲ್ಲಿ ಮಹಾವೀರ ಜಯಂತಿ
Tuesday, April 22, 2025
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಕರಾವಳಿ ಮತ್ತು ಮಲೆನಾಡಿನ ಸಮಸ್ತ ಜೈನ ಸಮಾಜ ಬಾಂದವರ ಸಹಕಾರದೊಂದಿಗೆ ಭ| ಮಹಾವೀರ ಸ್ವಾಮಿ ಜನ್ಮಕಲ್ಯಾಣ ಮಹೋತ್ಸವ ಆಚರಣೆಯು ಎ.27 ರಂದು ಸಂಜೆ 4ರಿಂದ ವಿದ್ಯಾಗಿರಿ ಕೃಷಿಸಿರಿ ವೇದಿಕೆಯಲ್ಲಿ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೆಂದ್ರ ಕುಮಾರ್ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಗುವುದು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನಭಜನೆ, ಮಹಾವೀರ ಸ್ವಾಮಿ ಜಿನಬಿಂಬ ಮೆರವಣಿಗೆ, ಜಿನ ಗಾನಾಮೃತ, ಮಹಾವೀರ ಸ್ವಾಮಿ ಜಿನಬಿಂಬಕ್ಕೆ ಮಂಗಳ ದ್ರವ್ಯಾಭಿಷೇಕ ಮತ್ತು ಅಷ್ಟವಿಧಾರ್ಚನೆ ನಡೆಯಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ. ಧನಕೀರ್ತಿ ಬಲಿಪ, ಆದಿರಾಜ್, ಶ್ವೇತಾ ಜೈನ್ ಉಪಸ್ಥಿತರಿದ್ದರು.