
‘ಜನಿವಾರ’ ಬ್ರಾಹ್ಮಣರ ಅಸ್ಮಿತೆ-ಅಸ್ತಿತ್ವ: ಮಹೇಶ್ ಕಜೆ
ಪುತ್ತೂರು: ಜನಿವಾರ ಎಂಬುವುದು ಕೇವಲ ನೂಲಲ್ಲ. ಅದು ಬ್ರಾಹ್ಮಣರ ಅಸ್ಮಿತೆ-ಅಸ್ತಿತ್ವ. ಸರ್ಕಾರದ ಕುಮ್ಮಕ್ಕಿನಿಂದ ಜನಿವಾರ ಕತ್ತರಿಸುವ ಮೂಲಕ ಘೋರ ಅಪರಾಧ ಎಸಗಲಾಗಿದೆ. ಈ ಪ್ರತಿಭಟನೆ ಅಧಿಕಾರದ ತೆವಲಿಗಲ್ಲ. ರಾಜಕೀಯಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಯೂ ಅಲ್ಲ ಬ್ರಾಹ್ಮಣ ಸಂಸ್ಕಾರವನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ನಡೆಯುತ್ತಿದೆ ಎಂದು ಬ್ರಾಹ್ಮಣ ಸಭಾದ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ಹೇಳಿದರು.
ಬೀದರಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿ ಪುತ್ತೂರಿನ ಅಮರ್ ಜವಾನ್ ಸ್ಮಾರಕದ ಬಳಿ ಸೋಮವಾರ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ವತಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜಕ್ಕೆ ಧಕ್ಕೆ ಬಂದರೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಬ್ರಾಹ್ಮಣ ಸಮಾಜದ ಮೇಲೆ ಏನೂ ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಸರ್ಕಾರಕ್ಕೆ ಬೇಡ. ಬ್ರಾಹ್ಮಣ ಹಾಗೂ ಗೋವಿನ ಮೇಲೆ ದಾಳಿ ನಡೆದರೆ ಇಡೀ ಭೂಮಿ ನಾಶವಾಗುತ್ತದೆ. ಈಗ ವಿದ್ಯಾರ್ಥಿಯ ಜತೆಗೆ ಆಟ ಆಡಿದ್ದಾರೆ. ಈ ಘಟನೆಯ ಹಿಂದಿರುವ ಕೈಗಳ ಹುನ್ನಾರ ಹೊರಗೆ ಬರಬೇಕು ಎಂದು ಅವರು ಆಗ್ರಹಿಸಿದರು.
ಶಾಂತಿ ಮಂತ್ರದೊಂದಿಗೆ ಆರಂಭವಾದ ಪ್ರತಿಭಟನೆಯಲ್ಲಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಉದ್ಯಮಿ ಜಿ.ಎಲ್. ಬಲರಾಮ ಆಚಾರ್ಯ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಡಾ. ಸುರೇಶ್ ಪುತ್ತೂರಾಯ, ನ್ಯಾಯವಾದಿ ಜಗನ್ನಿವಾಸ ರಾವ್, ಗೋಪಾಲಕೃಷ್ಣ ಹೇರಳೆ, ಮುಳಿಯ ಕೇಶವ ಪ್ರಸಾದ್, ವಿದ್ಯಾ ಆರ್. ಗೌರಿ ಮಾತನಾಡಿದರು.
ಉದ್ಯಮಿ ಸತ್ಯಶಂಕರ ಭಟ್ ಉಪಸ್ಥಿತರಿದ್ದರು. ಶಿವಶಂಕರ ಭಟ್ ಸ್ವಾಗತಿಸಿದರು. ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪ್ರತಿಭಟನಾಕಾರರು ಮಿನಿವಿಧಾನದ ಸೌಧದ ಮುಂಭಾಗಕ್ಕೆ ತೆರಳಿ ಈ ಘಟನೆಯ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವ ಮನವಿಯನ್ನು ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದರು.
ಹಿಂದೂ ಧಾರ್ಮಿಕ ಪರಂಪರೆಯನ್ನು ಉಳಿಸುವ ಕೆಲಸ ಬ್ರಾಹ್ಮಣ ಸಮಾಜದಿಂದ ಆಗುತ್ತಿದೆ. ಆದರೆ ವಿದ್ಯಾರ್ಥಿಯ ಜನಿವಾರ ಕತ್ತರಿಸುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ಅಪಮಾನ ಮಾಡಲಾಗಿದೆ. ಇಂತಹ ಘಟನೆಗಳು ಮುಂದೆ ಸಂಭವಿಸಿದರೆ ಕೊಡಲಿ ಹಿಡಿಯುವ ಸಂದರ್ಭವೂ ಬರಬಹುದು ಎಂದು ಎಚ್ಚರಿಕೆ ನೀಡಿದ ಅವರು ಈ ಬಗ್ಗೆ ಬ್ರಾಹ್ಮಣ ಸಮಾವೇಶ ಮಾಡುವ ಅಗತ್ಯವಿದೆ. ಈ ಬಗ್ಗೆ ಯಾವುದೇ ಸಂಘರ್ಷಕ್ಕೂ ನಾವು ಸಿದ್ಧರಾಗಿದ್ದೇವೆ. -ಅರುಣ್ ಕುಮಾರ್ ಪುತ್ತಿಲ