
ಸರ್ಕಾರಿ ಆಸ್ಪತ್ರೆಯ ವೈದ್ಯೆಗೆ ಹಲ್ಲೆ ಯತ್ನ-ಠಾಣೆಯ ಮುಂದೆ ಪ್ರತಿಭಟನೆ-ರಸ್ತೆ ತಡೆ ಬಂಧನಕ್ಕೆ ಗಡು: ಪುತ್ತೂರು ಬಂದ್ ಎಚ್ಚರಿಕೆ
ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರ ಜತೆಗೆ ಅನುಚಿತವಾದ ವರ್ತನೆ ಹಾಗೂ ಹಲ್ಲೆಗೆ ಮುಂದಾಗಿರುವ ಘಟನೆಗೆ ಸಂಬಂಧಿಸಿ ಸುಳ್ಯಪದವಿನ ಜೊಹರಾ ಮತ್ತು ಆಕೆಯ ಪುತ್ರ ಸಮದ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ‍್ಸ್ ಫಾರಂ, ಆಯುಷ್ ಸಂಸ್ಥೆ, ಇಡಿಂಯನ್ ಡೆಂಟಲ್ ಅಸೋಶಿಯೇಷನ್ ಮತ್ತು ಬಿಜೆಪಿ, ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ಆರೋಪಿಯ ಬಂಧನಕ್ಕೆ ಗಡುವು ನೀಡಲಾಯಿತು.
ಸರ್ಕಾರಿ ಆಸ್ಪತ್ರೆಯಲ್ಲಿ ವೀರಮಂಗಲದ ಅಝೀಝ್ ಕೈಮರ್ ಎಂಬವರ ಪತ್ನಿ ಝರೀನಾ ಎಂಬಾಕೆ ಹೆರಿಗೆಯಾಗಿ ವಾರ್ಡಿನಲ್ಲಿದ್ದು, ಇವರನ್ನು ವಿಚಾರಿಸಲು ಬಂದಿದ್ದ ಜೊಹರಾ ಮತ್ತು ಸಮದ್ ರೋಗಿಯ ಬೆಡ್ ಮೇಲೆ ಕುಳಿತಿದ್ದರು. ಈ ಸಂದರ್ಭದಲ್ಲಿ ರೋಗಿಯ ತಪಾಸಣೆಗೆ ಬಂದ ಡಾ. ಆಶಾ ಪುತ್ತೂರಾಯ ಅವರು ಇದು ರೋಗಿಗಳನ್ನಿ ಭೇಟಿ ಮಾಡುವ ಸಮಯವಲ್ಲ ಎಂದು ಹೇಳಿದ್ದರು. ಅದರಿಂದ ಸಿಟ್ಟಿಗೆದ್ದ ಜೊಹರಾ ವೈದ್ಯರೊಂದಿಗೆ ಏರುಧ್ವನಿಯಲ್ಲಿ ವಾಗ್ವಾದಕ್ಕಿಳಿದರು. ಆಕೆಯ ಮಗ ಏಕಾಎಕಿ ಅನುಚಿತವಾಗಿ ವರ್ತಿಸಿ ಏಕವಚನದಲ್ಲಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಲ್ಲದೆ ಕೈಯಿಂದ ದೂಡಿದ್ದಾರೆ. ರೋಗಿಗಳನ್ನು ನೋಡಲು ಬರುವ ಸಮಯವನ್ನು ಆಂಗ್ಲಭಾಷೆಯಲ್ಲಿ ಬರೆಯಬೇಕಾಗಿತ್ತು. ನಮಗೆ ಕನ್ನಡ ಬರುವುದಿಲ್ಲ. ಎಂದು ಜೋರಾಗಿ ಕಿರುಚಿ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ನನ್ನ ಫೋಟೋ ತೆಗೆದಿದ್ದಾರೆ ಎಂದು ಡಾ.ಆಶಾ ಪುತ್ತೂರಾಯ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಶುಕ್ರವಾರ ಸಂಜೆ ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಹಿಂದಕ್ಕೆ ಕಳುಹಿಸಿದ್ದರು.
ಬಳಿಕ ಆರೋಪಿಯನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಬಿಟ್ಟು ಕಳುಹಿಸಿರುವುದಾರಿ ಆರೋಪ ವ್ಯಕ್ತವಾಗಿತ್ತು. ಅದನ್ನು ಖಂಡಿಸಿ ಶನಿವಾರ ಪುತ್ತೂರಿನ ಐಎಂಎ ಸಹಿತ ವಿವಿಧ ವೈದ್ಯರ ಸಂಘದ ನೇತೃತ್ವದಲ್ಲಿ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು, ಖಾಸಗಿ ಕ್ಲೀನಿಕ್ ವೈದ್ಯರು ಸೇರಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿವನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಪ್ರಕರಣದಲ್ಲಿ ಠಾಣಾಧಿಕಾರಿಗಳು ನಿರ್ಲರ್ಕ್ಯ ವಹಿಸಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಘೋಷಣೆ ಕೂಗಿದರು. ಪೊಲೀಸರು ಮನವೊಲಿಸಿದರೂ ಜಗ್ಗದ ಪ್ರತಿಭಟನಾಕಾರರು ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಸಂಜೆ 6 ಗಂಟೆಯ ಒಳಗಾಗಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು. ಅಲ್ಲಿಗೆ ಪ್ರತಿಭಟನೆ ವಾಪಾಸು ಪಡೆದುಕೊಳ್ಳಲಾಯಿತು.
ರಾಜಕೀಯ ಮಾಡುವುದು ಸರಿಯಲ್ಲ: ಶಾಸಕ ಅಶೋಕ್ ರೈ
ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆ ಉಳಿದ ಸರಕಾರಿ ಆಸ್ಪತ್ರೆಗೆ ಹೋಲಿಸಿದರೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರ ಮೇಲೆ ನಡೆದ ಹಲ್ಲೆ ಯತ್ನ ಘಟನೆ ತಪ್ಪು. ಸರ್ಕಾರಿ ಆಸ್ಪತ್ರೆಗೆ ಹೋದ ಕೂಡಲೇ ಅದು ನನ್ನ ಗಂಟು ನನ್ನ ಆಸ್ತಿ ಎಂದು ತಿಳಿಯಬಾರದು. ತಪ್ಪು ಮಾಡಿದ್ದರೆ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಇದರಲ್ಲಿ ರಾಜಕೀಯ ಮಾಡಲು ದಯವಿಟ್ಟು ಹೋಗಬೇಡಿ. ರಕ್ಷಣೆ ಬಗ್ಗೆ ವೈದ್ಯರು ಹೆದರಬೇಕಾಗಿಲ್ಲ ಎಂದು ಹೇಳಿದರು.
ಪುತ್ತೂರು ಬಂದ್ ಎಚ್ಚರಿಕೆ:
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾದ್ಯಮದೊಂದಿಗೆ ಮಾತನಾಡಿ, ಈ ಘಟನೆಯ ಆರೋಪಿಗಳನ್ನು ಶನಿವಾರ ಸಂಜೆ ೬ ಗಂಟೆಯೊಳಗೆ ಬಂಧನ ಮಾಡಬೇಕು. ಆವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸು ದಾಖಲಾಗಬೇಕು. ಇಲ್ಲವಾದರೆ ಪ್ರತಿಭಟನೆ ಮುಂದುವರಿಯಲಿದೆ. ಸೋಮವಾರ ಪುತ್ತೂರು ಬಂದ್ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಐಎಂಎನ ಸೂಚನೆಯಂತೆ ಶನಿವಾರ ಪುತ್ತೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ವೈದ್ಯರು ಯಾವುದೇ ಸೇವೆ ನೀಡದೆ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಶನಿವಾರ ಪುತ್ತೂರಿನಲ್ಲಿ ಆರೋಗ್ಯ ಸೇವೆ ಬಂದ್ ಆಗಿತ್ತು.