
ನಿಧಾನಗತಿಯ ರಸ್ತೆ ಕಾಮಗಾರಿ: ಮೂಡುಬೆಳ್ಳೆಯಲ್ಲಿ ಧೂಳೇ ಧೂಳು...!-ಸಾರ್ವಜನಿಕರ ಆಕ್ರೋಶ: ರಸ್ತೆ ಬಂದ್‌ನ ಎಚ್ಚರಿಕೆ
ಶಿರ್ವ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬೆಳ್ಳೆ ಇದು ಉಡುಪಿ-ಕಾರ್ಕಳ-ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾಗಿದ್ದು, ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿ ಯಿಂದಾಗಿ ಮೂಡುಬೆಳ್ಳೆ ಧೂಳುಮಯವಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಒಂದುವರೆ ತಿಂಗಳಿಂದ ಅರ್ಧಂಬರ್ಧ ಕಾಮಗಾರಿ ನಡೆದು ಇನ್ನೂ ಪೂರ್ತಿಗೊಳ್ಳದ ಕಾರಣ ಈ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು. ರಿಕ್ಷಾ ಚಾಲಕರು, ವ್ಯಾಪಾರಿಗಳು ಬೆಳ್ಳೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣರವರ ಮುಂದಾಳತ್ವದಲ್ಲಿ ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾಜಿ ಎಸ್. ಸುವರ್ಣ ಕಳೆದ 6 ತಿಂಗಳಿಂದ ರಸ್ತೆ ಡಾಮರೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಪೂರ್ತಿಯಾಗದೆ ಪೇಟೆಪೂರ್ತಿ ಧೂಳಿನಲ್ಲಿ ಆವರಿಸಿದೆ. ಎಲ್ಲರಿಗೂ ತೀವ್ರ ಸಂಕಷ್ಟ ಎದುರಾಗಿದೆ. ಟ್ರಾಫಿಕ್ ಜಾಮ್ ಆಗುತ್ತಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ ಅಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ಗುತ್ತಿಗೆದಾರರಿಗೆ ಸೂಚನೆ ನೀಡಿ ರಸ್ತೆ ಡಾಮರೀಕರಣ ಪೂರ್ತಿ ಗೊಳಿಸಬೇಕು ಎಂದು ಸಾರ್ವಜನಿಕರ ಪರವಾಗಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಾಥ್ ನೀಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮೂಡುಬೆಳ್ಳೆ ಕೇಂದ್ರ ಸ್ಥಳವಾಗಿರುವುದರಿಂದ ಅತ್ಯುತ್ತಮ ಚರಂಡಿಯೊಂದಿಗೆ ಸಮರ್ಪಕ ರಸ್ತೆ ನಿರ್ಮಾಣವಾಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ರಸ್ತೆ ಬಂದ್ ಸಾರ್ವಜನಿಕರಿಂದ ಎಚ್ಚರಿಕೆ:
ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸೋಮನಾಥ್ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿ ತಕ್ಷಣ ಕಾಮಗಾರಿ ಆರಂಭಿಸಿ ಶೀಘ್ರವಾಗಿ ಮುಗಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕೂಡಲೇ ಕಾಮಗಾರಿ ಮುಗಿಸದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆಯ ಸಂದೇಶ ನೀಡಿದರು.
ರಿಕ್ಷಾ ಚಾಲಕರು ರಿಕ್ಷಾ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಅಂಗಡಿ ಮಾಲಕರು, ವ್ಯಾಪಾರಸ್ಥರೂ, ಕೆಲಹೊತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಬೆಳ್ಳೆ ಚರ್ಚ್‌ನ ಧರ್ಮಗುರುಗಳಾದ ರೆ.ಫಾ. ಜೋರ್ಜ್ ಡಿಸೋಜ, ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರೀತೇಶ್ ಡೇಸಾ, ಸ್ಥಳೀಯರಾದ ವಿನ್ಸೆಂಟ್ ಫೆರ್ನಾಂಡಿಸ್, ಚಾರ್ಲ್ಸ್ ಕ್ವಾಡ್ರಸ್, ರಂಜನಿ ಹೆಗ್ಡೆ, ಐಡಾಗಿಬ್ಬ ಡಿಸೋಜ, ನೆವಿಲ್ ಡಿಸೋಜ, ಎ.ಜಿ. ಡಿಸೋಜ, ನಿರಂಜನ್ ರಾವ್ ಬೆಳ್ಳೆ, ರಿತೇಶ್ ಡಿಸೋಜ, ಸುಧಾಕರ ಅಮೀನ್, ರಿಚ್ಚಾರ್ಡ್ ರೋಡ್ರಿಗಸ್, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು.