
ಗ್ಯಾಂಗ್ ರೇಪ್ ಪ್ರಕರಣ, ಆರೋಪಿಗಳು ಉಳ್ಳಾಲ ಪೊಲೀಸ್ ಕಸ್ಟಡಿಗೆ
ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪದಡಿ ಬಂಧಿತ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಶುಕ್ರವಾರದಂದು ಸರಕಾರಿ ರಜಾ ದಿನದ ಕಾರಣ ಮ್ಯಾಜಿಸ್ಟ್ರೇಟರ್ ಮನೆಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕೂಚ್ ಬಿಹಾರದ ಹತ್ತೊಂಭತ್ತು ವರುಷದ ಯುವತಿಯೋರ್ವಳಿಗೆ ಕೆಲಸ ಕೊಡಿಸುವ ಅಮಿಷವೊಡ್ಡಿ ,ಆಕೆಗೆ ಮದ್ಯ ಕುಡಿಸಿ ಕುತ್ತಾರು ರಾಣಿಪುರ ರಿಷಿವನ ಕಾನ್ವೆಂಟ್ ಬಳಿಯ ನದಿ ತೀರದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಆರೋಪಿಗಳಾದ ಆಟೋ ರಿಕ್ಷಾ ಚಾಲಕ ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38) ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸದ ಕುಂಪಲ ,ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37) ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂಬವರನ್ನು ಶುಕ್ರವಾರದಂದು ಉಳ್ಳಾಲ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದಿದ್ದಾರೆ.
ಉಳ್ಳಾಲ ಪೊಲೀಸರು ಕಸ್ಟಡಿಯಲ್ಲಿರುವ ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಶನಿವಾರದಂದು ಸ್ಥಳ ಮಹಜರು ನಡೆಸುವ ಸಾಧ್ಯತೆಗಳಿವೆ.ಸಂತ್ರಸ್ತ ಪಶ್ಚಿಮ ಬಂಗಾಳ ಮೂಲದ ಯುವತಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಯುವತಿ ಮೇಲೆ ಅತ್ಯಾಚಾರ ನಡೆದಿದೆಯೇ ಇಲ್ಲವೇ ಎಂಬುದು ವೈದ್ಯಕೀಯ ವರದಿ ಸಿಗದ ಕಾರಣ ಇನ್ನೂ ಕುತೂಹಲ ಕಾರಿ ಪ್ರಶ್ನೆ ಯಾಗಿ ಉಳಿದಿದೆ.