
ಸಹೋದರಿಯರ ಸಿಂಧೂರ ಅಳಿಸಿದವರಿಗೆ ಆಪರೇಷನ್ ಸಿಂಧೂರ ಉತ್ತರ ಕೊಟ್ಟಿದೆ: ರಾಜೇಶ್ ನಾಯ್ಕ್ ಉಳಿಪ್ಪಾಡಿ
Wednesday, May 7, 2025
ಬಂಟ್ವಾಳ: ಕಾಶ್ಮೀರದ ಪೆಹಲ್ ಗಾಂವ್ನಲ್ಲಿ ಅಮಾಯಕ ೨೬ ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ ನರ ರಾಕ್ಷಸರನ್ನು ನಮ್ಮ ಭಾರತೀಯ ಸಹೋದರಿಯರ ಸಿಂಧೂರವನ್ನು ಅಳಿಸಿಹಾಕಿದ ಘೋರ ಕೃತ್ಯಕ್ಕೆ ಭಾರತ ತಕ್ಕ ಶಾಸ್ತಿ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದಿಟ್ಟ ಉತ್ತರ ನೀಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಿಳಿಸಿದ್ದಾರೆ.
ಭಾರತೀಯ ಸೇನೆಯ ಈ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಜೇಶ್ ನಾಯ್ಕ್ ಭಾರತೀಯ ಸೈನಿಕರು ಪಾಕಿಸ್ತಾನದ ಉಗ್ರಗಾಮಿ ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಮರಣದಂಡನೆಯನ್ನೇ ನೀಡಿದ್ದು, ಉಗ್ರಗಾಮಿ ಕೃತ್ಯ ಎಸಗುವವರಿಗೆ ಭಾರತ ತಕ್ಕ ಶಾಸ್ತಿ ಮಾಡುತ್ತದೆ, ದಿಟ್ಟ ಉತ್ತರ ನೀಡುತ್ತದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದೆ. ಭಾರತದಲ್ಲಿ ಆತಂಕ ಸೃಷ್ಟಿಸುವ ಉಗ್ರಗಾಮಿ ಕೃತ್ಯಗಳನ್ನು ಬೆಂಬಲಿಸುತ್ತಾ, ಕುಮ್ಮಕ್ಕು ನೀಡುವವರಿಗೂ ಇದು ಎಚ್ಚರಿಕೆಯ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಸರಕಾರವು ದೇಶದ ರಕ್ಷಣೆ, ಸುರಕ್ಷತೆ ಹಾಗೂ ಆತಂಕವಾದವನ್ನು ಮಟ್ಟ ಹಾಕುವ ಯಾವುದೇ ಕೆಲಸ ಕಾರ್ಯಗಳಿಗೆ ಭಾರತೀಯರೆಲ್ಲರೂ ಬೆಂಬಲಿಸುವ ಮೂಲಕ ಸುಭದ್ರ ರಾಷ್ಟ್ರನಿರ್ಮಾಣಕ್ಕೆ ಕೈಜೋಡಿಸಬೇಕು. ಭಾರತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ಇದನ್ನು ಬುಡಮೇಲು ಮಾಡುವವರಿಗೆ ತಕ್ಕ ಪಾಠ ಕಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಶೌರ್ಯಭರಿತ ಸೈನ್ಯಕ್ಕೆ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಎಂದು ಅವರು ತಿಳಿಸಿದ್ದಾರೆ.