
ಶಿರಾಡಿಘಾಟನಲ್ಲಿ ಭೂಕುಸಿತದಿಂದ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್: ಬದಲಿ ಮಾರ್ಗ ಸೂಚನೆ
ದ.ಕ./ಹಾಸನ/ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸಕಲೇಶಪುರ, ಆಲೂರು, ಬೇಲೂರು ಹಾಗೂ ಹಾಸನದಲ್ಲಿ ವರುಣರಾಯ ಆರ್ಭಟಿಸುತ್ತಿದ್ದಾರೆ. ವರುಣನ ಅಬ್ಬರಕ್ಕೆ ಶಿರಾಡಿಘಾಟ್ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಮಣ್ಣು ಕುಸಿದು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಬಳಿ ರಸ್ತೆ ಮೇಲೆ ಆಳವಾಗಿ ಗುಂಡಿ ಬಿದ್ದಿವೆ. ರಸ್ತೆಯಲ್ಲಿಯೇ ವಾಹನಗಳು ಕೆಟ್ಟು ನಿಂತಿವೆ. ವಾಹನಗಳು ಕೆಟ್ಟು ನಿಂತಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರ ಪರದಾಡುತ್ತಿದ್ದಾರೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಅರವಿಂದ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿದ್ದರಿಂದ ಬದಲಿ ಮಾರ್ಗದಲ್ಲಿ ವಾಹನಗಳು ಸಂಚಾರ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾರ್ಲೆ ಮಾರ್ಗವಾಗಿ ಹಾನುಬಾಳು ರಸ್ತೆಯ ಮೂಲಕ ಸಕಲೇಶಪುರದಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ.