
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ಗೋಡೆಯಲ್ಲಿ ಪ್ರಚೋದನಕಾರಿ ಬರಹ: ಪ್ರಕರಣ ದಾಖಲು
Friday, May 9, 2025
ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಶೌಚಾಲಯದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹ ಬರೆದಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ವಸತಿ ನಿಲಯದ ಶೌಚಾಲಯದ ಒಳಗಡೆ ಒಂದು ಪೆನ್ನನ್ನು ಇಟ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ಬರೆದಿರುತ್ತಾರೆ. ಅದು ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಧಕ್ಕೆ ತರುವ ರೀತಿಯಲ್ಲಿ ಬರೆದಿರಲಾಗಿರುತ್ತದೆ. ಈ ಬಗ್ಗೆ ಹಾಸ್ಟೆಲಿನ ಮ್ಯಾನೇಜರ್ ಪೊಲೀಸರಿಗೆ ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅದನ್ನು ಯಾರೋ ಅಪರಿಚಿತ ವಿದ್ಯಾರ್ಥಿಗಳು ಬರೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಆ ಬಗ್ಗೆ ಕೂಲಕಂಶ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.