
ಅನಾಗರಿಕ ವ್ಯವಸ್ಥೆ ವಿರುದ್ಧ ಹೋರಾಡಿ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಿ: ಬಿ.ಕೆ.ಹರಿಪ್ರಸಾದ್
ಕೊಣಾಜೆ: ಈಗ ದೇಶದಲ್ಲಿ ಶ್ರೀಮಂತನಿಂದ ಮೊದಲ್ಗೊಂಡು ಭಿಕ್ಷುಕನಿಗೂ ಜಿಎಸ್‌ಟಿ ವ್ಯವಸ್ಥೆ ಇರುವಂತೆ ಕೇರಳದಲ್ಲಿ ಶತಮಾನದ ಹಿಂದೆ ಮಹಿಳೆಯರು ಮೈಮುಚ್ಚುವ ಮೇಲಿನ ರವಿಕೆ ಧರಿಸಲೂ ತೆರಿಗೆ ಪಾವತಿಸಬೇಕಿತ್ತು. ಅಂಥ ಅನಾಗರಿಕ ವ್ಯವಸ್ಥೆ ವಿರುದ್ಧ ಹೋರಾಡಿ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಿ ಎಂದು ಸಮಾಜಕ್ಕೆ ಸಾರಿದವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಹೇಳಿದರು.
ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ಗ್ರಾಮಚಾವಡಿ ಯಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವಾದರ್ಶದಂತೆ ಬಡವರಿಗೆ, ಅಸಾಹಾಯಕರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ನಮ್ಮದಾಗಬೇಕು. ಶಿಕ್ಚಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ, ಒಗ್ಗಟ್ಟು ಸಾಧ್ಯ. ಶಿಕ್ಷಣ ಇಲ್ಲದ ಸಮಾಜ ವ್ಯರ್ಥ. ಮಂಗಳೂರು ವಿವಿಯಲ್ಲಿ ನಾರಾಯಣ ಗುರುವರ್ಯರ ಕುರಿತು ಸಂಶೋಧನೆ ಮತ್ತು ಅಧ್ಯಯನ ಮಾಡುವ ದೃಷ್ಟಿಯಿಂದ ಬ್ರಹ್ಮಶ್ರೀ ನಾರಾಯಣ ಅಧ್ಯಯನ ಪೀಠ ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು, ಯುವಪೀಳಿಗೆ ಗುರುವರ್ಯರ ತತ್ವಾದರ್ಶಗಳನ್ನು ಅರಿತು ಮುನ್ನಡೆಯಬೇಕು ಎಂದು ಹೇಳಿದರು.
ಶಾಸಕರು ಹಾಗೂ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ ಇಂದು ತಲೆ ಎತ್ತಿರುವ ನೂತನ ಸಮುದಾಯ ಭವನ ನಿರ್ಮಾಣದ ಹಿಂದೆ ದಾನಿಗಳು, ಶಾಸಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಕೈಜೋಡಿಸಿದ್ದು ಅವರೆಲ್ಲರ ಸೇವಾ ಮನೋಭಾವನೆ ಸುಂದರ ಭವನ ನಿರ್ಮಾಣಕ್ಕೆ ಕಾರಣ ವಾಗಿದ್ದು ಎಲ್ಲಕ್ಕಿಂತ ಮುಖ್ಯವಾಗಿ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರು ರಾಜ್ಯಸಭಾ ಸದಸ್ಯ ನಿಧಿಯಿಂದ ೫೦ಲಕ್ಷ ರೂ. ಅನುದಾನ ನೀಡಿದ್ದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.
ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನ ಮಾಣಿಲ,ಕುಕ್ಕಾಜೆ ಇದರ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಆಶೀರ್ವಚನಗೈದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಅವರು, ಗುರುವರ್ಯರ ಮಾರ್ಗದರ್ಶನದಂತೆಯೇ ಸಮಾಜದಲ್ಲಿರುವ ಅಶಕ್ತರಿಗೆ, ಬಡವರಿಗೆ ಶಕ್ತಿ ತುಂಬುವ ಕೆಲಸ ಸಂಗಹದ ಮೂಲಕ ಆಗಬೇಕಿದೆ ಎಂದರು.
ಸಮಾರಂಭದಲ್ಲಿ ಸಂಘದ 5 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ರಾಜನ್ ದೈವಗಳ ದರ್ಶನ ಪಾತ್ರಿ ಹಾಗೂ ಮೂಲ್ಯ ಪೂಜಾರಿಗಳಾದ ಸುಬ್ರಾಯ ಪೂಜಾರಿ, ಮುದರ ಯಾನೆ ಮುಂಡಪ್ಪ ಪೂಜಾರಿ, ವಿಜೇಶ್ ಪೂಜಾರಿ ಇನೋಳಿ, ಸುರೇಂದ್ರ ಪೂಜಾರಿ ಪಾವೂರು, ನಾಗರಾಜ ಪೂಜಾರಿ ಪಾವೂರು, ಐತಪ್ಪ ಪೂಜಾರಿ ಇರಾ ಇವರನ್ನು ಸನ್ಮಾನಿಸಲಾಯಿತು.
ಕುದ್ತೋಳಿ ಗೋಕರ್ಣಾಥೇಶ್ವರ ಪದ್ಮರಾಜ್ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕೆ.ಟಿ.ಸುವರ್ಣ, ಮಂಗಳೂರು ಬಿಲ್ಲವ ಸಂಘ ಒಕ್ಕೂಟದ ಸುಮಲತಾ ಎನ್ ಸುವರ್ಣ, ಕಾಸರಗೋಡು ಬ್ರಹ್ಮಶ್ರೀ ನಾರಾಯಣ ಗುರುವೇದಿಕೆ ಅಧ್ಯಕ್ಷರಾದ ಶ್ರೀಕೃಷ್ಣ ಶಿವಕೃಪಾ, ಶ್ತೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಬೆಳ್ತಂಗಡಿ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತ ಬಂಗೇರ, ಲೋಕೇಶ್ ಕೋಟ್ಯಾನ್, ಅಳಿಕೆ ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಯಶೋಧರ ಬಂಗೇರ, ದಾನಿಗಳಾದ ರೋಹಿದಾಸ್ ಪಾಂಡೇಶ್ವರ,ಲೋಕಾರ್ಪಣೆ ಸಮಿತಿ ಗೌರವ ಅಧ್ಯಕ್ಷ ರಾದ ರಾಘವ ಪೂಜಾರಿ, ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಕೋಟ್ಯಾನ್ ಕಿಲ್ಲೂರು, ಕಟ್ಟಡ ಸಮಿತಿ ಯ ಲಕ್ಷ್ಮಣ ಸಾಲ್ಯಾನ್ ಬೊಳ್ಳೂರು, ಸಮಿತಿ ಸಂಚಾಲಕ ಗಂಗಾಧರ ಪೂಜಾರಿ ಪಜೀರು, ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಸೂರಜ್ ಪಿಯು ಕಾಲೇಜು ಅಧ್ಯಕ್ಷರಾದ ಡಾ.ಮಂಜುನಾಥ್ ರೇವಣ್ಕರ್, ಕೊಣಾಜೆ ಯುವ ವಾಹಿನಿ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ರವೀಂದ್ರ ಬಂಗೇರ ಕೊಣಾಜೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಭಾಷ್ ಧರ್ಮನಗರ ವಂದಿಸಿದರು. ಅಜಿತ್ ಪೂಜಾರಿ ಹಾಗೂ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.