
ಸಾಲಿಗ್ರಾಮ ಪ.ಪಂ.: ಒತ್ತುವರಿ ತೆರವಿಗಾಗಿ "ಆಪರೇಷನ್ ಫುಟ್ ಪಾತ್" ನಡೆಸಲು ಸೂಚನೆ
ಕುಂದಾಪುರ: ಸಾಲಿಗ್ರಾಮ ಪೇಟೆಯಲ್ಲಿ ಮುಖ್ಯ ರಸ್ತೆ ಒತ್ತುವರಿಯಾಗಿದೆ ಎಂಬ ಬಹುಕಾಲದ ದೂರಿಗೆ ಇದೀಗ ಪಟ್ಟಣ ಪಂಚಾಯತ್ ಸ್ಪಂದಿಸಿದೆ. ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ನಿಗದಿತ ಅವಧಿಯೊಳಗೆ ಅಕ್ರಮ ಕಟ್ಟಡಗಳನ್ನು ಸಂಬಂಧಿಸಿದವರು ತೆರವುಗೊಳಿಸದಿದ್ದರೆ 'ಆಪರೇಷನ್ ಫುಟ್ ಪಾತ್' ಕಾರ್ಯಾಚಾರಣೆ ನಡೆಸುವುದಾಗಿ ಪಟ್ಟಣ ಪಂಚಾಯತ್ ಘೋಷಿಸಿದೆ. ಈ ಬಗ್ಗೆ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾದಂತೆ,
ದಿನಾಂಕ: 27-12-2022 ರಂದು ಸರ್ವೇ ಇಲಾಖೆ ಬ್ರಹ್ಮಾವರ ಹಾಗೂ ಪಟ್ಟಣ ಪಂಚಾಯತ್ ಸಾಲಿಗ್ರಾಮ ಇವರು ಜಂಟಿಯಾಗಿ ಸಾಲಿಗ್ರಾಮ ಒಳಪೇಟೆ ರಸ್ತೆ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ನಕ್ಷೆ ವರದಿಯನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಒಳಪೇಟೆ ಅಂಗಡಿ ಮುಂಗಟ್ಟುದಾರರು ಸದ್ರಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ 3 ದಿನದೊಳಗೆ ಅಂದರೆ ದಿನಾಂಕ:17-05-2025ರ ಒಳಗೆ ತೆರವುಗೊಳಿಸತಕ್ಕದ್ದು, ತಪ್ಪಿದ್ದಲ್ಲಿ ದಿನಾಂಕ:16-04-2025 ರಂದಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯದಂತೆ ಸಾಲಿಗ್ರಾಮ ಪಂಚಾಯತ್ ವತಿಯಿಂದ ʼʼಆಪರೇಶನ್ ಫುಟ್ ಫಾತ್ʼʼ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿ ಅತಿಕ್ರಮಿತ ಅಂಗಡಿಗಳನ್ನು ತೆರವುಗೊಳಿಸುವುದರೊಂದಿಗೆ ಸದ್ರಿ ಕಾರ್ಯಾಚರಣೆಗೆ ತಗಲಿದ ಖರ್ಚು ವೆಚ್ಚದ ವಸೂಲಿಯೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.