ಮಾನವೀಯತೆ ನಿರೂಪಿಸುವಲ್ಲಿ ಕಾರಂತರು ಯಶಸ್ವಿ: ಮೀನಾಕ್ಷಿ ರಾಮಚಂದ್ರ

ಮಾನವೀಯತೆ ನಿರೂಪಿಸುವಲ್ಲಿ ಕಾರಂತರು ಯಶಸ್ವಿ: ಮೀನಾಕ್ಷಿ ರಾಮಚಂದ್ರ


ಮಂಗಳೂರು: ಹೆಣ್ಣಿಗೆ ಆಯ್ಕೆ ಸ್ವಾತಂತ್ರ್ಯ ಇರಲಿಲ್ಲ. ಸಮಾಜದಲ್ಲಿ ಕುರುಡಾಗಿ ಬದುಕುತ್ತಿದ್ದ ಹೆಣ್ಣಿನ ಅಂತರಾಳದಲ್ಲಿ ಏನಿತ್ತು ಎಂಬುದನ್ನು ಮಾನವೀಯ ಅಂತಃಕರಣ ಮೂಲಕ ಸಾಹಿತ್ಯದೊಳಗೆ ನಿರೂಪಿಸುವಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ ಎಂದು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ರಾಮಚಂದ್ರ ಹೇಳಿದರು. 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠ ಮತ್ತು ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗದ ವತಿಯಿಂದ ನಡೆದ ಕಾರಂತ ಸಾಹಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರಂತರೆಂದರೆ ಸಾಗರ. ಅವರ ಕುರಿತು ಹೇಳುವುದೆಲ್ಲವೂ ಸಾಸಿವೆ ಗಾತ್ರದಷ್ಟು ಮಾತ್ರವೇ ಆಗಿರುತ್ತದೆ. ಅವರ ಯಾವುದೇ ಕೃತಿಗಳನ್ನು ಅಳತೆ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಅದರಲ್ಲಿರುವ ಮೌಲ್ಯದಿಂದ ಅವುಗಳು ಒಂದಕ್ಕೊಂದು ಮಿಗಿಲು. ವರ್ಣಭೇದ ಮತ್ತು ಲಿಂಗಭೇದಗಳು ಕಾರಂತರ ಮನಸ್ಸನ್ನು ಎಷ್ಟು ಕದಲಿಸುತ್ತಿತ್ತು ಎಂಬುದಕ್ಕೆ ಅವರ ಸರಸಮ್ಮನ ಸಮಾಧಿ ಮತ್ತು ಚೋಮನ ದುಡಿ ಕೃತಿಗಳನ್ನು ಅಧ್ಯಯನ ಮಾಡಬಹುದಾಗಿದೆ ಎಂದರು. 

ವ್ಯಕ್ತಿಯೊಬ್ಬ ಏನೆಲ್ಲಾ ಸಾಧಿಸಲು ಸಾಧ್ಯವಿದೆ ಎಂಬುದಕ್ಕೆ ಪುರಾವೆ ಸಹಿತ ಬದುಕಿ ಸಾಧಿಸಿದ ವ್ಯಕ್ತಿ ಕಾರಂತರು. ಅವರಿಗೆ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠ ಸಲಹಾ ಸಮಿತಿ ಸದಸ್ಯ ಹಾಗೂ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ನರಸಿಂಹ ಮೂರ್ತಿ, ಸರಿಸಾಮಾನರನ್ನು ಹುಡುಕುವುದು ಕಷ್ಟಸಾಧ್ಯ. ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಅವರ ಪ್ರತಿಭೆ ಅನಾವರಣಗೊಂಡಿದೆ. ಕಾರಂತರ ಕೃತಿಗಳನ್ನು ಓದಿದರೆ ಸಾಲದು, ಅನುಕರಿಸಬೇಕು. ಕಾರಂತರ ಪ್ರತಿ ಕೃತಿ ಬದುಕಿನ ಪ್ರೀತಿ, ಅಂತರಾಳದ ಅನುಭವ ಜೀವನದ ಸಾರ್ಥಕತೆಗಳನ್ನು ತಿಳಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಪರಿಸರದಲ್ಲಿ ಕುಳಿತು ಕಲಿಯಬೇಕೆಂಬ ಆಸಕ್ತಿವುಳ್ಳ ಕಾರಂತರು ಯಾವ ವಿದ್ವತ್ತು, ಪ್ರಭುತ್ವಕ್ಕೆ ಕಡಿಮೆ ಎನಿಸದ ವ್ಯಕ್ತಿ. ಸಾಮಾಜಿಕ ಚೌಕಟ್ಟಿನಲ್ಲಿ ಜಾತಿಯನ್ನು ವಿರೋಧಿಸಿದವರು ಅವರು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮಿದೇವಿ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರಂತರ ಜನ್ಮದಿನೋತ್ಸವ 2024ರಂದು ಕಾರಂತರ ಸಾಹಿತ್ಯ ಕುರಿತು ನಡೆಸಲಾದ ಗ್ರಂಥ ವಿಮರ್ಶೆ, ಪ್ರಬಂಧ, ರಸಪ್ರಶ್ನೆ ಮತ್ತು ಚಿತ್ರ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article