
ಮುಳುಗಿದ ಸರಕು ಸಾಗಾಟದ ಹಡಗು: ಸಿಬ್ಬಂದಿ ರಕ್ಷಣೆ
Thursday, May 15, 2025
ಮಂಗಳೂರು: ಬಂದರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣಿಸುತ್ತಿದ್ದ ಎಂಎಸ್‌ವಿ ಸಲಾಮತ್ ಎಂಬ ಸರಕು ಹಡಗು ಮಂಗಳೂರಿನ ನೈರುತ್ಯಕ್ಕೆ ಸುಮಾರು 60 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ ಸಿಬಂದಿಯನ್ನು ಕೋಸ್ಟ್‌ಗಾರ್ಡ್ ಸಿಬಂದಿ ರಕ್ಷಿಸಿದ್ದಾರೆ.
ಈ ಹಡಗು ಮೇ 12 ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿತ್ತು. ಮೇ 18 ರಂದು ಕಡ್ಮತ್ ದ್ವೀಪವನ್ನು ತಲುಪುವ ನಿರೀಕ್ಷೆಯಿತ್ತು. ಮೇ 14 ರಂದು ಬೆಳಗ್ಗೆ ಭಾರತೀಯ ಕಾಲಮಾನ ಸುಮಾರು 5.30 ರ ವೇಳೆಗೆ ಬೃಹತ್ ಅಲೆಯೊಂದಕ್ಕೆ ಸಿಲುಕಿ ಹಡಗು ಮುಳುಗಡೆಯಾಗಿದೆ. ಆದರೆ ನೈಜ ಕಾರಣ ಇನ್ನೂ ತಿಳಿದು ಬಂದಿಲ್ಲ.
ಹಡಗಿನಲ್ಲಿ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿ ಮತ್ತು ಆಹಾರ ವಸ್ತುಗಳು ಇದ್ದವು. ಮುಳುಗುತ್ತಿರುವ ಹಡಗಿನಲ್ಲಿದ್ದ ಸಿಬಂದಿ ಸಣ್ಣ ಡಿಂಗಿ ದೋಣಿಯನ್ನು ಆಶ್ರಯಿಸಿದ್ದು, ವ್ಯಾಪಾರಿ ಹಡಗೊಂದರ ಸಿಬಂದಿ ಇದನ್ನು ಗಮನಿಸಿ ಮಂಗಳೂರಿನ ಭಾರತೀಯ ಕರಾವಳಿ ಕಾವಲು ಪಡೆಗೆ ತಿಳಿಸಿದ್ದಾರೆ. ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಮ್ ಡಿಂಗಿ ದೋಣಿಯಿಂದ ಎಲ್ಲ ಸಿಬಂದಿಗಳನ್ನು ರಕ್ಷಿಸಿ ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಗುರುವಾರ ನವ ಮಂಗಳೂರು ಬಂದರಿಗೆ ಕರೆತಂದಿದ್ದಾರೆ.