
ರಸ್ತೆಯಲ್ಲಿಯೇ ಹುಟ್ಟುಹಬ್ಬ ಆಚರಣೆ: 9 ಮಂದಿಯ ವಿರುದ್ಧ ಪ್ರಕರಣ
ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ರಸ್ತೆಯಲ್ಲಿ ನಿಂತು ವಾಹನದ ಮೇಲೆ ಗೆಳೆಯರು ಸೇರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದವರ ವಿರುದ್ಧ ಸ್ಥಳೀಯ ಪೊಲೀಸರು 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಗ್ರಾಮದ ರೋಹಿತ್ ಪೈ (19) ಎಂಬಾತನ ಹುಟ್ಟುಹಬ್ಬದ ಪ್ರಯುಕ್ತ ಮೇ 28ರಂದು ರಾತ್ರಿ ಕೊಟ್ಟಿಗೆಹಾರ ಸಮೀಪ ರಸ್ತೆಯಲ್ಲಿ ಕೇಕ್ ಕತ್ತರಿಸಿ ಬಳಿಕ ಮುಖಕ್ಕೆ ಬಳಿದುಕೊಂಡು ಕಿರುಚಾಡುತ್ತಿದ್ದುದನ್ನು ರಾತ್ರಿ ಕರ್ತವ್ಯದಲ್ಲಿದ್ದ ಬಣಕಲ್ ಪೊಲೀಸರು ಘಟನೆ ಕಂಡು ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದವರಾದ ಗಣೇಶ (24), ಪ್ರದೀಪ (19), ಸೂರಜ್ ಎಸ್. ಸಾಲಿಯಾನ್ (19), ಸುಜಿತ್ (19), ಅಜಿತ್ (18), ಸುದೀಪ್ (23), ಮಡಂತ್ಯಾರ್ ಗ್ರಾಮದವರಾದ ಸೂರಜ್ ಶೆಟ್ಟಿ (23), ಮೊಹಮ್ಮದ್ ಅಶ್ರಫ್, ರೋಹಿತ್ ಪೈ (19) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಸಿದ್ಧ ಪ್ರವಾಸಿ ತಾಣ ದೇವರಮನೆಗುಡ್ಡದ ನಡುರಸ್ತೆಯಲ್ಲಿ ತಲೆ, ಮುಖದ ಮೇಲೆಲ್ಲ ಕೇಕ್ ಮೆತ್ತಿಕೊಂಡು ಹುಟ್ಟುಹಬ್ಬ ಆಚರಿಸಿ ರಂಪಾಟ ಮಾಡಲಾಗಿತ್ತು. ನಡುರಸ್ತೆಯಲ್ಲೇ ರಿಕ್ಷಾ, ಕಾರು ಗಳನ್ನು ನಿಲ್ಲಿಸಿದ್ದಲ್ಲದೆ ಮದ್ಯಪಾನವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲಿನ ರಸ್ತೆ ಕಿರಿದಾಗಿದ್ದು, ಪ್ರಪಾತದ ಸಮೀಪವಿದೆ. ಇಂತಹ ಸ್ಥಳದಲ್ಲಿ ನಿಯಮ ಉಲ್ಲಂಘಿಸಿ ಬರ್ತ್ಡೇ ಆಚರಣೆಗೆ ಇಳಿದಿರುವುದು ಅಪಾಯವನ್ನು ಆಹ್ವಾನಿಸುತ್ತಿತ್ತು.