ದ್ವೇಷ ಭಾಷಣ, ಪ್ರಚೋದನಕಾರಿ ಪೋಸ್ಟ್: ಅಧಿವೇಶನದಲ್ಲಿ ಚರ್ಚಿಸಿ ಕಠಿಣ ಕಾನೂನು

ದ್ವೇಷ ಭಾಷಣ, ಪ್ರಚೋದನಕಾರಿ ಪೋಸ್ಟ್: ಅಧಿವೇಶನದಲ್ಲಿ ಚರ್ಚಿಸಿ ಕಠಿಣ ಕಾನೂನು

ಮಂಗಳೂರು: ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಾನೂನನ್ನು ಬಲಪಡಿಸುವ ಅಗತ್ಯವಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಕಠಿಣ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂರಾವ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸಾರ್ವಜನಿಕ ಅಹವಾಲು ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಕೋಮು ಪ್ರಚೋದನೆಗಳಿಂದ ಅಮಾಯಕರ ಹತ್ಯೆಗೆ ಕಾರಣವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಲ್ಲೆ, ಹತ್ಯೆ ಸೇರಿದಂತೆ ಕೋಮು ಗಲಭೆ ಹಾಗೂ ಪ್ರಚೋದನೆಯ ಕೃತ್ಯಗಳಲ್ಲಿ ತೊಡಗಿರುವವರು ಅಕ್ರಮ ಚಟುವಟಿಕೆಗಳಲ್ಲೂ ಭಾಗಿಯಾಗಿರುತ್ತಾರೆ. ಆದರೆ ಇಂತಹ ಪ್ರಕರಣಗಳಲ್ಲಿ ಸುಲಭವಾಗಿ ಜಾಮೀನು ದೊರೆಯುತ್ತದೆ. ಹಾಗಾಗಿ ಕಾನೂನಿನ ಭಯ ಇಲ್ಲಾಗಿದೆ. ಇದಕ್ಕಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದವರು ಹೇಳಿದರು. 

ಈ ರೀತಿಯ ಕೋಮು ಭಾಷಣಗಳನ್ನು ಮಾಡುವರು ಹಿರಿಯ ನಾಯಕರೇ ಆಗಿರುತ್ತಾರೆ. ಯತ್ನಾಳ್ ಆದಿಯಾಗಿ ಜಿಲ್ಲೆಯ ಶಾಸಕರೂ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಆದರೂ ಸುಲಭವಾಗಿ ಜಾಮೀನು ದೊರೆಯುತ್ತದೆ. ಕೋಮು ಪ್ರಚೋದನೆಯ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರಿಗೂ ಸಂಘಟನೆಯ ಬೆಬಂಲ, ರಾಜಕೀಯ ರಕ್ಷಣೆ ಇದೆ. ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಕೋಮು ಸಂಘರ್ಷ, ಗಲಭೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಮೂಲಕ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಇತಿಶ್ರೀ ಹಾಡುತ್ತೇವೆ ಎಂದವರು ಹೇಳಿದರು.

ಯಾವುದೇ ಸಂಘಟನೆಯನ್ನ ಬ್ಯಾನ್ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಮುಖಂಡರಾದ ಕಣಚೂರು ಮೋನು, ಪದ್ಮರಾಜ್, ಮುಹಮ್ಮದ್ ಮೋನು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article