
ಸುಹಾಸ್ ಶೆಟ್ಟಿ ಹತ್ಯೆ: ಎನ್‌ಐಎಗೆ ಒಪ್ಪಿಸುವಂತೆ ಮೇ.9 ರಂದು ರಾಜ್ಯಪಾಲರ ಭೇಟಿ
Wednesday, May 7, 2025
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಜನರು ಭಾಗಿಯಾಗಿ ಷಡ್ಯಂತ್ರ ನಡೆಸಿದ ಗುಮಾನಿ ಇದೆ. ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಂಡಿಂಗ್ ನಡೆದಿದೆ. ಜತೆಗೆ ಮಂಗಳೂರಿನ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಆರೋಪವಿದೆ. ಹತ್ಯೆಗೆ ಸಹಕರಿಸಿದ ಮಹಿಳೆಯರನ್ನು ಇದುವರೆಗೆ ಬಂಧಿಸಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಮೂಲಕವೇ ತನಿಖೆ ನಡೆಸಬೇಕು. ಆಗಷ್ಟೇ ಸತ್ಯ ಬಹಿರಂಗವಾಗಲು ಸಾಧ್ಯ. ಆದರೆ ರಾಜ್ಯ ಸರ್ಕಾರ ಈ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇಲ್ಲ. ಹೀಗಾಗಿ ರಾಜ್ಯಪಾಲರ ಮಧ್ಯಪ್ರವೇಶ ಆಗಬೇಕು. ಈ ಹಿನ್ನೆಲೆಯಲ್ಲಿ ಕರಾವಳಿಯ ಉಭಯ ಜಿಲ್ಲೆಯ ಶಾಸಕರು ಮೇ 9 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಸುಹಾಸ್ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಲಿದ್ದೇವೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.