
ಕಾರ್ಮಿಕ ಸಂಹಿತೆ ಕಾರ್ಮಿಕರನ್ನು ಗುಲಾಮಗಿರಿಯತ್ತ ದೂಡುವ ವ್ಯವಸ್ಥಿತ ತಂತ್ರ: ಸುನಿಲ್ ಕುಮಾರ್ ಬಜಾಲ್
Thursday, May 1, 2025
ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಲು ಹೊರಟ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡಲು ಉತ್ಸುಕವಾಗಿದೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ.ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರವು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ, ಸಂಘ ಕಟ್ಟುವ,ಮುಷ್ಕರ ಹೂಡುವ, ಬೇಡಿಕೆ ಪಟ್ಟಿ ಇಡುವ, ಒಪ್ಪಂದ ವೇರ್ಪಡಿಸುವ ಮುಂತಾದ ಎಲ್ಲಾ ಹಕ್ಕುಗಳನ್ನು ನಾಶ ಮಾಡುವ ಮೂಲಕ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ದೂಡುವ ವ್ಯವಸ್ಥಿತ ತಂತ್ರ ಇದಾಗಿದೆ ಎಂದು CITU ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಆರೋಪಿಸಿದರು.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೇ 1ರಂದು ಬೆಳಿಗ್ಗೆ 9.30ಕ್ಕೆ ನಗರದ ರಾವ್ ಅಂಡ್ ರಾವ್ ಸರ್ಕಲ್ ಬಳಿಯಿಂದ ಕಾರ್ಮಿಕರ ಆಕರ್ಷಕ ಮೆರವಣಿಗೆ ನಡೆದು,ಬಳಿಕ ಮಿನಿವಿಧಾನ ಸೌಧದ ಬಳಿಯಲ್ಲಿರುವ NGO ಹಾಲ್ ನಲ್ಲಿ ಜರುಗಿದ ಕಾರ್ಮಿಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು,ಈ ಮಾತುಗಳನ್ನು ಹೇಳಿದರು.
ಜಾತಿ ಧರ್ಮ ಲಿಂಗ ಪಕ್ಷ ಪಂಗಡ ಭೇಧಭಾವವಿಲ್ಲದೆ ಇಡೀ ಜಗತ್ತಿನ ಜನತೆ ಒಂದಾಗಿ ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ,ನೀವು ಕಳೆದುಕೊಳ್ಳಲು ಏನೂ ಇಲ್ಲ ದಾಸ್ಯದ ಸಂಕೋಲೆಗಳ ಹೊರತುಪಡಿಸಿ, ಆದರೆ ಗಳಿಸಲು ನಿಮ್ಮ ಮುಂದೆ ಇಡೀ ಜಗತ್ತೇ ಇದೆ ಎಂದು ವಿಶ್ವ ಮಾನವ ಸಂದೇಶ ಸಾರುತ್ತಾ ದುಡಿಯುವ ವರ್ಗದ ಐಕ್ಯತೆಯನ್ನು ಪ್ರತಿಪಾದಿಸುವ ಮೇ ದಿನಾಚರಣೆಯು ಅತ್ಯಂತ ಮಹತ್ವದ ದಿನವಾಗಿದೆ.ಇಂದಿನ ಬದಲಾದ ಕಾಲಘಟ್ಟದಲ್ಲಿ ದುಡಿಯುವ ವರ್ಗದ ಸಿದ್ದಾಂತದಿಂದ ಮಾತ್ರವೇ ವಿಶ್ವದ ದೇಶದ ನಾಡಿನ ಜನತೆಯನ್ನು ಒಂದಾಗಿಸಲು ಸಾಧ್ಯ. ಯಾಕೆಂದರೆ ಅದರಲ್ಲಿ ಮಾನವೀಯ ಮೌಲ್ಯಗಳಿವೆ, ಸೌಹಾರ್ದತೆಯ ಆಶಯಗಳಿವೆ. ಸಹೋದರತೆಯ ಗುಣಗಳಿವೆ. ಯುದ್ಧದ ಕಾರ್ಮೋಡ ಕವಿದಿರುವ ವಿಶ್ವದಲ್ಲಿ, ಬಂಡವಾಳಶಾಹಿಗಳ ಲಾಭಕೋರತನದಿಂದ ನಲುಗಿರುವ ಜಾಗತಿಕ ಆರ್ಥಿಕತೆಯಿಂದಾಗಿ ದುಡಿಯುವ ವರ್ಗ ತೀವ್ರ ಸಂಕಷ್ಟದಲ್ಲಿದ್ದು ಸಮರಶೀಲ ಹೋರಾಟಗಳ ಮೂಲಕ ದುಡಿಯುವ ವರ್ಗವನ್ನು ರಕ್ಷಿಸಲು ಈ ವರ್ಷದ ಮೇ ದಿನಾಚರಣೆ ನಾಂದಿ ಹಾಡಬೇಕೆಂದು ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಚೀನಾ ದೇಶದ ಮಹಾನ್ ಗೋಡೆ, ವಿಶ್ವ ಪ್ರಸಿದ್ಧ ತಾಜ್ ಮಹಲ್, ಪಿರಮಿಡ್, ಕನ್ನಂಬಾಡಿ ಅಣೆಕಟ್ಟುಗಳನ್ನು ಕಟ್ಟಿದ್ದು ಕಾರ್ಮಿಕ ವರ್ಗವೇ ಹೊರತು ಬೇರಾರು ಅಲ್ಲ. ಕಾರ್ಮಿಕ ವರ್ಗದ ಸಿದ್ಧಾಂತದಿಂದ ಮಾತ್ರ ಸಮಗ್ರವಾದ ಬದಲಾವಣೆ ಸಾಧ್ಯ* ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ CITU ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಾರ್ಮಿಕ ವರ್ಗ ಮಾತ್ರ ದೇಶವನ್ನು ಸರಿಯಾದ ಮಾರ್ಗದಲ್ಲಿ ಮುಂದಕ್ಕೊಯ್ಯಲು ಸಾಧ್ಯ. ಪ್ರಸ್ತುತ ಜಗತ್ತಿನ 5 ದೇಶದಲ್ಲಿ ಸಮಾಜವಾದಿ ವ್ಯವಸ್ಥೆ ಇದೆ. ಈ ವ್ಯವಸ್ಥೆ ಬರಲು ಕಾರ್ಮಿಕ ವರ್ಗವೇ ಕಾರಣ. ಆದರೆ ಇಂದು ಮೇ ದಿನದ ಆಶಯವನ್ನೇ ಬುಡಮೇಲು ಮಾಡಲಾಗಿದೆ. ಕಾರ್ಮಿಕರ ದುಡಿಮೆಯ ಅವಧಿಯನ್ನು 10-12 ಗಂಟೆಗೆ ಏರಿಸಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಕೆಲಸದ ಅವಧಿಯನ್ನು ಹೆಚ್ಚಿಸಲಾಗಿದೆ. ಇಂದಿನ ರಾಜ್ಯ ಸರಕಾರವೂ ಕೂಡ ಈ ಬಗ್ಗೆ ಚಕಾರಶಬ್ದವನ್ನೆತ್ತದೆ ಕಾಎ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ದೂರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೇದಿನ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು ಮೇ ದಿನದ ಹಿನ್ನಲೆ, ಹೋರಾಟದ ಪರಂಪರೆ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ಕಾರ್ಮಿಕ ವರ್ಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ರವಿಚಂದ್ರ ಕೊಂಚಾಡಿ, ಮುಝಾಫರ್ ಅಹಮದ್, ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಚರಣ್ ಶೆಟ್ಟಿ, ಬಿ.ಎನ್. ದೇವಾಡಿಗ, ವಸಂತ ಕುಮಾರ್,ಲೋಯ್ಡ್ ಡಿಸೋಜ, ಬಿ.ಎಂ. ಮಾಧವ, ಫಾರೂಕ್, ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.