
ಶೀಘ್ರವೇ ಶಾಂತಿ ಸಮಿತಿ ಸಭೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಮರು ಸ್ಥಾಪಿಸುವ ದೃಷ್ಟಿಯಲ್ಲಿ ಶೀಘ್ರವೇ ಶಾಂತಿ ಸಮಿತಿ ಸಭೆ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಪರಸ್ಪರರೊಳಗಿನ ಮನಸ್ತಾಪ ದೂರಗೊಳಿಸಿ ಬಂಧುತ್ವ ಗಟ್ಟಿಗೊಳಿಸಲು ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದು ಒಂದು ವಾರ, ಒಂದು ವರ್ಷದ ಕೆಲಸ ಅಲ್ಲ, ಶಾಶ್ವತವಾಗಿ ಕದಡಿದ ಮನಸ್ಸನ್ನು ಒಂದು ಮಾಡುವ ಕಾರ್ಯ ನಡೆಯಬೇಕು. ಕರಾವಳಿಯ ಶೇ.೯೮ ಮಂದಿಗೆ ಶಾಂತಿ ಬೇಕು, ಶೇ. ೨ ರಷ್ಟು ಮಂದಿಗೆ ಸ್ವಾರ್ಥ, ರಾಜಕೀಯ ಲಾಭ, ಸಂಘಟನೆ ದುರುಪಯೋಗಪಡಿಸಲು ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಅದೇ ಸಾಧನೆ ಎಂದು ಮಾತನಾಡುತ್ತಾರೆಯೇ ವಿನಃ ಬೇರೇನೂ ಮಾಡುವುದಿಲ್ಲ. ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಸ್ಥಾಪಿಸುವ ಬಗ್ಗೆ ಎಲ್ಲ ಸಮಾಜದ ಮುಖಂಡರನ್ನು ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದರು.
ಹಸ್ತಕ್ಷೇಪ ಇಲ್ಲ..:
ಮಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಹೊಸ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಸಾಕಷ್ಟು ಶ್ರಮಿಸುವ ವಿಶ್ವಾಸ ಇದೆ. ಭದ್ರತೆ ಮತ್ತು ಕಾನೂನು ಉಲ್ಲಂಘನೆ ವಿರುದ್ಧ ಯಾವುದೇ ರಾಜಿ ಇಲ್ಲದಂತೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಸರ್ಕಾರದ ಬೆಂಬಲ ಅಥವಾ ಯಾವುದೇ ಹಸ್ತಕ್ಷೇಪ ಇಲ್ಲದೆ ಅವರು ಕಾರ್ಯನಿರ್ವಹಿಸಲಿದ್ದಾರೆ. ಎಲ್ಲವನ್ನೂ ಕಾನೂನು ಪ್ರಕಾರ ಮಾಡುವಂತೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ. ಪಾರದರ್ಶಕ ವ್ಯವಸ್ಥೆಯಡಿ ಧೈರ್ಯದಿಂದ ಕೆಲಸ ಮಾಡುವಂತೆ ಹೇಳಿದ್ದೇನೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೊಸ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ಅಧಿಕಾರಿಗಳ ವರ್ಗಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.