ಅಪರಾಧ ಕೃತ್ಯ-ಜಂಟಿ ಕಾರ್ಯಾಚರಣೆಗಳ ಮೂಲಕ ಹತ್ತಿಕ್ಕುತ್ತೇವೆ: ಸುಧೀರ್ ರೆಡ್ಡಿ

ಅಪರಾಧ ಕೃತ್ಯ-ಜಂಟಿ ಕಾರ್ಯಾಚರಣೆಗಳ ಮೂಲಕ ಹತ್ತಿಕ್ಕುತ್ತೇವೆ: ಸುಧೀರ್ ರೆಡ್ಡಿ


ಮಂಗಳೂರು: ದ.ಕ. ಜಿಲ್ಲೆಯ ನಗರ ಆಗಿರಲಿ, ಗ್ರಾಮಾಂತರ ಆಗಿರಲಿ ಎಲ್ಲೇ, ಯಾವುದೇ ರೀತಿಯ ಅಪರಾಧ ಕೃತ್ಯ ನಡೆದಾಗ ಅಥವಾ ಅಕ್ರಮ ಚಟುವಟಿಕೆಗಳು ನಡೆದಾಗ ಅದನ್ನು ಜಂಟಿ ಕಾರ್ಯಾಚರಣೆಯ ಮೂಲಕ ನಿಭಾಯಿಸಲಿದ್ದೇವೆ ಎಂದು ಮಂಗಳೂರಿನ ನೂತನ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶನಿವಾರ  ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ತನ್ನನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದರು.

ಕ್ರಿಮಿನಲ್‌ಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗಿದರೂ ಎಸ್ಪಿ, ಡಿಸಿಪಿಗಳ ಜತೆ ಜಂಟಿ ಕಾರ್ಯಾಚರಣೆ ಮೂಲಕ ಅಪರಾಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು. ಈ ಕಾರ್ಯಾಚರಣೆ ಇತರ ಅಕ್ರಮ ಚಟುವಟಿಕೆಗಳಿಗೂ ಅನ್ವಯವಾಗಲಿದೆ ಎಂದವರು ಹೇಳಿದರು.

ಈ ಸಂದರ್ಭ ಜತೆಯಲ್ಲಿದ್ದ ಎಸ್ಪಿ ಡಾ. ಅರುಣ್ ಕುಮಾರ್ ಅವರೂ ದನಿಗೂಡಿಸಿ, ಅದಕ್ಕಾಗಿಯೇ ನಾವು ಜತೆಯಲ್ಲಿಯೇ ಇಲ್ಲಿದ್ದೇವೆ ಎಂದರು.

ಕೋಮು ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುತ್ತಿರುವವರ ಕುರಿತು ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯಿಸಿದ ಸುಧೀರ್ ರೆಡ್ಡಿ, ಯಾರದ್ದೇ ಯಾವ ಮಾತೂ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವಂತಿರಬಾರದು. ವಾಕ್ ಸ್ವಾತಂತ್ರ್ಯ ಮತ್ತು ಅಪರಾಧ ಕೃತ್ಯಗಳಿಗೆ ಜನರನ್ನು ಪ್ರಚೋದಿಸುವ ಮಾತುಗಳ ನಡುವೆ ಸ್ಪಷ್ಟವಾದ ಅಂತರವಿದೆ. ಪ್ರಚೋದನೆ ನೀಡುವ ರೀತಿಯಲ್ಲಿ ಕಾನೂನಿಗೆ ವಿರುದ್ಧವಾಗಿ ಮಾತನಾಡಿದರೆ ಸಿಆರ್‌ಪಿಸಿ, ಐಪಿಸಿ ಕಾನೂನುಗಳಿವೆ. ಕಾನೂನಿನಲ್ಲಿ ಈ ಬಗ್ಗೆ ಕ್ರಮಕ್ಕೆ ಸಾಕಷ್ಟುಅವಕಾಶಗಳಿದ್ದು, ಇಲಾಖೆ ಸೂಕ್ತ ಕ್ರಮ ವಹಿಸಲಿದೆ ಎಂದು  ಹೇಳಿದರು.

ಕೋಮು ದ್ವೇಷ,ಯಾವುದೇ ಘಟನೆ ಆದಾಗ ತನಿಖೆ ನಡೆಸುತ್ತೇವೆ. ಇಲ್ಲಿನ ಜನರು ಬುದ್ಧಿವಂತರು. ಅವರಿಗೆ ಕಾನೂನಿನ ಅರಿವಿದೆ. ನಮ್ಮ ಪೊಲೀಸ್ ಇಲಾಖೆಯೂ ಅದೇ ಕಾನೂನನ್ನು ಕಲಿತು, ಅದನ್ನು ಪಾಲಿಸುತ್ತದೆ. ಪ್ರತಿ ಅಪರಾಧಕ್ಕೂ ತಕ್ಕುದಾದ ಕಾನೂನು ಇದೆ. ಆ ಕಾನೂನಿಗೆ ಅನುಸಾರವಾಗಿ ಕ್ರಮ ಆಗುತ್ತದೆ ಎಂದು ಹೇಳಿದರು.

ಠಾಣೆಗಳಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತಳ ಹಂತದ ಪೊಲೀಸ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯವಿರುವ ಬೇಡಿಕೆ ಕುರಿತ ಪ್ರಶ್ನೆಗೆ

ಪ್ರತಿಕ್ರಿಯಿಸಿದ ಅವರು, ಎಲ್ಲಾ ಅಧಿಕಾರಿ ಸಿಬ್ಬಂದಿ ಉತ್ತಮವಾಗಿದ್ದಾರೆ. ಯಾರೇ ತಮ್ಮ ಕರ್ತವ್ಯದಲ್ಲಿ ವಿಫಲ ಆಗಿದ್ದಾರೆ ಎಂದರೆ ಅದರ ಜವಾಬ್ಧಾರಿಯನ್ನು ನಾನು ವಹಿಸುತ್ತೇನೆ. ನಮ್ಮ ಮಾರ್ಗದರ್ಶನವನ್ನು ಸರಿಯಾದ ದಿಸೆಯಲ್ಲಿ ಬಳಸಿಕೊಂಡು ಅವರು ಕಾರ್ಯ ನಿರ್ವಹಿಸಿದಾಗ ಯಾವುದೇ ತೊಂದರೆ ಆಗದು ಎಂದರು. 

ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳ ಜತೆ ಉಸ್ತುವಾರಿ ಸಚಿವರು ನಮ್ಮ ಜತೆ ಚರ್ಚಿಸಿದ್ದಾರೆ. ಸಲಹೆ ಸೂಚನೆ ನೀಡಿದ್ದಾರೆ ಎಂದವರು ಹೇಳಿದರು.

ಪೊಲೀಸ್ ಕಮಿಷನರ್ ನಡೆಸುತ್ತಿದ್ದ ಫೋನ್ ಇನ್ ಕಾರ್ಯಕ್ರಮ ಮತ್ತೆ ಪುನರಾರಂಭ ಆಗಲಿದೆಯೇ ಎಂಬ ಪ್ರಶ್ನೆಗೆ, ಯಾವುದೇ ದೂರನ್ನು ಸಾರ್ವಜನಿಕರು ನೇರವಾಗಿ ನಮಗೆ ತರಬಹುದು. ಮಾಧ್ಯಮದ ಮೂಲಕ ಬಂದ ದೂರನ್ನು ಪರಿಗಣಿಸಲಾಗುವುದು. ಯಾವುದೇ ಅಪರಾಧ ಪ್ರಕರಣಗಳು ನಡೆದಾಗಲೂ ಹಿಂದೆಯೂ ತನಿಖೆ ಆಗಿದೆ. ಮುಂದೆಯೂ ಆಗಲಿದೆ. ನಮ್ಮ ಕೆಲಸವೇ

ಪೊಲೀಸಿಂಗ್ ಮಾಡುವಂತದ್ದು. ಅದನ್ನು ನಾವು ನಿಭಾಯಿಸುತ್ತೇವೆ ಎಂದು ಹೇಳಿದರು.

ಡಿಸಿಪಿ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article