
ಇತ್ತೀಚಿಗಿನ ವರ್ಷದಲ್ಲಿ ದೇಶವನ್ನು ಏಕಾಧಿಪತ್ಯ ಆಡಳಿತಕ್ಕೆ ಬದಲಿಸಲು ಪ್ರಯತ್ನ ನಡೆಯುತ್ತಿದೆ: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಮಂಗಳೂರು: ಸತ್ಯ, ವೈಜ್ಞಾನಿಕತೆ ಮುಂತಾದುವುಗಳನ್ನು ಬಚ್ಚಿಟ್ಟು ಸುಳ್ಳು ಅವೈಜ್ಞಾನಿಕತೆ, ಮೂಢನಂಬಿಕೆ ಮೂಂತಾದವುಗಳನ್ನು ಬಿತ್ತರಿಸಿ ಜನರನ್ನು ಮೂಢರಾಗಿಸುವ ಪ್ರಕ್ರಿಯೆ ಮೂಲಕ ದೇಶವನ್ನು ಏಕಾಧಿಪತ್ಯ ಆಡಳಿತಕ್ಕೆ ಬದಲಿಸಲು ಎಲ್ಲಾ ಪ್ರಯತ್ನಗಳು ಇತ್ತೀಚಿಗಿನ ವರ್ಷಗಳಲ್ಲಿ ನಡೆಯುತ್ತಿದೆ ಎಂದು ಪ್ರಖ್ಯಾತ ವೈದ್ಯ ಹಾಗೂ ಪ್ರಗತಿಪರ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
ಅವರು ಭಾರತ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಮಿತಿ ವತಿಯಿಂದ, ಪಕ್ಷದ ಶತಮಾನೋತ್ಸವ ಸಂದರ್ಭದಲ್ಲಿ. ವಿಶ್ವ ಕಾರ್ಮಿಕ ದಿನವಾದ ಮೇ ಒಂದರಂದು ಮಂಗಳೂರಿನ ಬಿಜೈಯಲ್ಲಿರುವ ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಭವನದಲ್ಲಿ ಕಾ. ಎಸ್.ವಿ. ಘಾಟೆಯವರ ನುಡಿಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಮಂಗಳೂರಿನ ಸುಪುತ್ರ ಎಸ್.ವಿ. ಘಾಟೆ ಅವರು, ಮುಂಬಯಿಗೆ ತೆರಳಿ ಇತರರಂತೆ ಅಲ್ಲಿ ವ್ಯಾಪಾರ ವಹಿವಾಟು ನಡೆಸದೆ, ಅಲ್ಲಿ ಕೆಲಸಮಾಡುತ್ತಿರುವ ಕಾರ್ಮಿಕರ ಸ್ಥಿತಿಗತಿಗಳನ್ನು ಗಮನಿಸಿ ಅವರನ್ನು ದಾಸ್ಯದಿಂದ ಬಿಡುಗಡೆಮಾಡುವ ಕೆಲಸಕ್ಕೆ ಮುಂದಾದರು. ಮಾರ್ಕ್ಸವಾದ ಲಿನಿನ್‌ವಾದ ಮುಂತಾದ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಆಳವಾಗಿ ಅಭ್ಯಾಸಮಾಡಿ, ಅದೊಂದೇ ಮಾನವ ವಿಮೋಚನೆಯ ಮಾರ್ಗ ಎಂದು ತಿಳಿದುಕೊಂಡರು. ಕಮ್ಯುನಿಸ್ಟ್ ಚಿಂತಕರನ್ನು ಒಗ್ಗೂಡಿಸಿ ‘ಭಾರತ ಕಮ್ಯುನಿಸ್ಟ್ ಪಕ್ಷ’ವನ್ನು 1925ರಲ್ಲಿ ಕಟ್ಟಿ ಅದರ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿಯಾದರು ಎಂದರು.
ಸ್ವಾತಂತ್ರ್ಯ ಹೋರಾಟ, ಕಾರ್ಮಿಕರ ಹಾಗೂ ಬಡಜನರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರು ಅನೇಕ ಬಾರಿ ಜೈಲು ಸೇರಿದರು. ಕಾರ್ಮಿಕ ಚಳುವಳಿ ಹಾಗೂ ಕಮ್ಯುನಿಸ್ಟ್ ಚಳುವಳಿ ದೇಶದಲ್ಲೆಲ್ಲಾ ಪಸರಿಸಲು ಇವರು ಮಾಡಿದ ಪ್ರಯತ್ನಗಳಿಂದಾಗಿ, ಸ್ವಾತಂತ್ರ್ಯಾ ನಂತರದ ಕೆಲ ವರ್ಷಗಳಲ್ಲಿ ದೇಶದ ಪ್ರಮುಖ ಪ್ರತಿಪಕ್ಷವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಮೂಡಿಬಂತು. ದೇಶದ ಈಗಿನ ಬಲಪಂಥೀಯ ಪ್ರಭಲತೆಯನ್ನು ತಡೆಹಿಡಿಯಬೇಕಾದರೆ ನಾವು ಸಿಪಿಐ ಪಕ್ಷವನ್ನು ಬಲಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಹಿಂದೆಂದಿಗಿಂತಲೂ ಹೆಚ್ಚಿನ ಶ್ರಮವಹಿಸಿ ಮಾಡಬೇಕಿದೆ ಎಂದು ಹೇಳಿದರು.
ಎಸ್.ವಿ. ಘಾಟೆಯವರ ಸಂಬಂಧಿ ಸುಮನಾ ಘಾಟೆ ಮಾತನಾಡಿ, ಅಜ್ಜ ಘಾಟೆಯವರು ಕುಟುಂಬದೊಂದಿಗೆ ಬಹಳ ಆತ್ಮೀಯವಾಗಿ ವರ್ತಿಸುತಿದ್ದರು. ಅವರೆಂದರೆ ಎಲ್ಲರಿಗೂ ಪ್ರೀತಿ, ವಿಶ್ವಾಸವಿದ್ದಿತ್ತು. ಎಸ್‌ವಿ ಘಾಟೆಯವರು ನಮ್ಮ ಕುಟುಂಬದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯೆನಿಸುತ್ತದೆ ಎಂದು ತಿಳಿಸಿದರು.
ಮತ್ತೊಬ್ಬ ಅಥಿತಿ ನಿವೃತ್ತ ಪ್ರಾಂಶುಪಾಲ ಹಾಗೂ ಜನಪರ ಚಿಂತಕ ಡಾ. ವಸಂತ ಕುಮಾರ್ ಮಾತನಾಡಿ, ‘ಯುವಪೀಳಿಗೆ ದೇಶದ ಭವಿಷ್ಯ. ಆದರೆ ಅವರನ್ನು ಧರ್ಮ, ಜಾತಿ, ರಾಷ್ಟ್ರೀಯತೆ ಹೆಸರಲ್ಲಿ ದಾರಿತಪ್ಪಿಸಲಾಗುತ್ತಿದೆ. ಅವರನ್ನು ಸರಿದಾರಿಗೆ ತರುವಲ್ಲಿ ನಾವು ಯಶಸ್ವಿಯಾದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಇಲ್ಲವಾದಲ್ಲಿ ದುರಂತ ಖಂಡಿತ. ಈ ದಿಸೆಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಪಕ್ಷದ ದ.ಕ. ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖರ ಬಿ. ವಹಿಸಿದ್ದರು. ಸೀತಾರಾಮ ಬೇರಿಂಜೆ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಬಂಟ್ವಾಳ ವಂದಿಸಿದರು.