ಹಿಂದೂ ಯುವಕರ ಹತ್ಯೆ ನಡೆದದ್ದೇ ಬಿಜೆಪಿ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ: ಮಂಜುನಾಥ ಭಂಡಾರಿ

ಹಿಂದೂ ಯುವಕರ ಹತ್ಯೆ ನಡೆದದ್ದೇ ಬಿಜೆಪಿ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ: ಮಂಜುನಾಥ ಭಂಡಾರಿ


ಮಂಗಳೂರು: ಕೊಲೆ ಮಾಡುವ ಕುಕೃತ್ಯ ಯಾರೇ ಮಾಡಿದರೂ ಅದು ಖಂಡನೀಯ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಯುವಕರ ಹತ್ಯೆ ನಡೆದದ್ದೇ, ಬಿಜೆಪಿ ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆರೋಪಿಸಿದರು.

ಅವರು ಇಂದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿ, ಇತ್ತೀಚೆಗೆ ಬಜಪೆ ಸಮೀಪ ನಡೆದ ಸುಹಾಸ್ ಶೆಟ್ಟಿ ಕೊಲೆ ಖಂಡನೀಯ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ, ಇಂತಹ ಘಟನೆ ನಡೆದಾಗ ಕೋಮು ಪ್ರಚೋದನೆಯ ವಾತಾವರಣ ಸೃಷ್ಟಿಸುವ ಯತ್ನ ಬಿಜೆಪಿಯವರಿಂದ ನಡೆಯುತ್ತದೆ ಎಂದು ಆರೋಪಿಸಿದರು. 

‘ಕೊಲೆಯಾಗುವುದನ್ನೇ ಕಾಯ್ತಾ ಇರ್ತೀರಾ? ಕೊಲೆಯಾದ ವ್ಯಕ್ತಿಯ ಹಿನ್ನೆಲೆಯನ್ನು ಯಾವ ರೀತಿ ನೋಡುತ್ತೀರಾ? ಹಾರ, ತುರಾಯಿ ಹಾಕಿ ವೈಭವೀಕರಿಸುವುದು ಎಷ್ಟು ಸರಿ’ ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು. 

ಹಿಂದೆ ಕೀರ್ತಿ ಎಂಬ ಯುವಕನ ಕೊಲೆಯಲ್ಲಿ ಸುಹಾಸ್ ಶೆಟ್ಟಿ ಪಾತ್ರವಿರುವ ಬಗ್ಗೆ ಆರೋಪವಿದೆ. ಸುಹಾಸ್ ಮೇಲೆ ಐದು ಪೊಲೀಸ್ ಪ್ರಕರಣಗಳು ಇವೆ. ಹಾಗಿದ್ದರೆ ಕೊಲೆಯಾಗಿರುವ ದಲಿತ ಯುವಕ ಕೀರ್ತಿ ಹಿಂದೂ ಅಲ್ಲವೇ ಎಂದು ಪ್ರಶ್ನಿಸಿದ ಅವರು ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯಬಾರದು. ಜನಪ್ರತಿನಿಧಿಗಳು ಘನತೆ ಉಳಿಸಿಕೊಳ್ಳಬೇಕು ಎಂದರು.

ರೌಡಿ ಶೀಟರ್ ಸುಹಾಸ್ ಕೊಲೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಯಾರೂ ಈ ರೀತಿ ಕೊಲೆಯಾಗಬಾರದು. ಆದರೆ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂದು ಹೇಳುವ ಬಿಜೆಪಿ ಶಾಸಕರು, ಅವರ ಸರಾಕರವಿದ್ದಾಗ, ಅವರದ್ದೇ ಗೃಹ ಸಚಿವರು ಇದ್ದಾಗ ಸುಹಾಸ್ ಮೇಲೆ ರೌಡಿಶೀಟರ್ ಹಾಕಿದಾಗ ವಿಧಾಸಭೆಯಲ್ಲಿ ಯಾಕೆ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಮನ್ನಣೆ ನೀಡಿ ಪ್ರತ್ಯೇಕ ನೀತಿ ಜಾರಿ, ಗೋವಾ ಪ್ರವಾಸೋದ್ಯಮ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ರಾತ್ರಿ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಖುದ್ದು ಉಪ ಮುಖ್ಯಮಂತ್ರಿಯವರು ಈಗಾಗಲೇ ಕರಾವಳಿ ಶಾಸಕರ ಸಭೆ ನಡೆಸಿದ್ದಾರೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮದ ಜತೆಗೆ ವೈಭವದ ನಗರವಾಗಿ ಗತಕಾಲದ ವೈಭವವನ್ನು ಮರಳಿಸುವ ಆಶಾಭಾವನೆ ಮೂಡಿಸಿತ್ತು. ಆದರೆ ಬಿಜೆಪಿಯವರು ಇಂತಹ ಕೊಲೆಗಳನ್ನು ರಾಜಕೀಯಕ್ಕೆ ಬಳಸುವ ಮೂಲಕ ಕರಾವಳಿಯ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಕೊಲೆ ಮಾಡಿದವರು ಹಾಗೂ ಈ ಕೊಲೆಯ ಹಿಂದೆ ಇರುವರನ್ನು ಗುರುತಿಸಿ ಶಿಕ್ಷೆ ಆಗಲೇಬೇಕು. ಜತೆಗೆ ಕೋಮು ಪ್ರಚೋದನೆಯನ್ನೂ ನಾವು ಖಂಡಿಸುತ್ತೇವೆ. ಎರಡು ವರ್ಷಗಳ ಹಿಂದೆ ಭಾಷಣವೊಂದರಲ್ಲಿ ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು, ದ.ಕ.ಜಿಲ್ಲೆಯಲ್ಲಿ ಹಿಂದು, ಮುಸ್ಲಿಂ ಕ್ರೈಸ್ತರು ಒಗಟ್ಟಾಗಿ ಜಾತಿ ಮತ, ಧರ್ಮದ ಬೇಧವಿಲ್ಲದೆ ಬದುಕುತ್ತಿದ್ದೆವು. ಆದರೆ ನಾಯಕರು ಮತ ಪೆಟ್ಟಿಗೆಗೆ ಕೈ ಹಾಕಿದ ಬಳಿಕ ಕೋಮು ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯವರು ಕೊಲೆ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸುವ ವೇಳೆ ಆ ವ್ಯಕ್ತಿಯ ಹಿನ್ನೆಲೆಯನ್ನೂ ನೋಡಬೇಕು. ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಸೇರಿದಂತೆ ಯಾವುದೇ ರೀತಿಯ ತನಿಖೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕೋಮು ಗಲಭೆಗಳಲ್ಲಿ ಜೈಲಿಗೆ ಹೋದವರಿಗೆ ಹಾರ ತುರಾಯಿ ಹಾಕಿ ಯುವಕರನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಾರೆ. ಸುಹಾಸ್ ಶೆಟ್ಟಿಯಿಂದ ಹಿಂದೂವೊಬ್ಬನ ಕೊಲೆಯಾದಾಗ ಬಿಜೆಪಿ ಖಂಡಿಸಬೇಕಿತ್ತು ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿಕೆಶಿ ಮೇಲೂ ಪ್ರಕರಣಗಳಿವೆ ಎಂದು ಎಂದು ಹೇಳುವ ಶಾಸಕರು, ರೌಡಿಶೀಟರ್, ಕೊಲೆ ಆರೋಪಗಳಂತಹ ಪ್ರಕರಣಗಳು ಹಾಗೂ ಇತರ ಪ್ರಕರಣಗಳ ಬಗ್ಗೆ ಕನಿಷ್ಟ ಜ್ಞಾನವನ್ನು ಹೊಂದಿಲ್ಲವೇ ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಉಡುಪಿ ಮಠಕ್ಕೆ ಮುಸ್ಲಿಂ ಬಾಂಧವರ ಕೊಡುಗೆ ಇದೆ ಎಂದು ಹೇಳಿ, ವಿರೋಧದ ನಡುವೆಯೂ ಇಫ್ತಾರ್ ಕೂಟವನ್ನು ಆಯೋಜಿಸಿ ಸೌಹಾರ್ದತೆಯ ಸಂದೇಶ ನೀಡಿದ್ದ ಉಡುಪಿಯ ಹಿಂದಿನ ಶ್ರೀಗಳ ಶಿಷ್ಯರಾಗಿರುವ ಹಾಲಿ ಶ್ರೀಗಳು ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ, ದೇಶವನ್ನಾಳುತ್ತಿರುವ ಸರಕಾರ ಹಿಂದೂಗಳಿಗೆ ರಕ್ಷಣೆ ಕೊಡುತ್ತಿಲ್ಲ ಎಂದು ಅವರು ಹೇಳಿತ್ತಿದ್ದರೆ, ನೇರವಾಗಿ ಅವರ ರಾಜೀನಾಮೆ ಕೇಳಿ ಎಂದು ಉಡುಪಿ ಶ್ರೀಗಳ ಹೇಳಿಕೆ ಬಗ್ಗೆ ಸವಾಲೆಸೆದರು.

ರಾಜ್ಯದಲ್ಲಿ ಹಿಂದೂ ಯುವಕರಿಗೆ ರಕ್ಷಣೆ ಇಲ್ಲ ಎನ್ನುವ ಉಡುಪಿಯ ಶ್ರೀಗಳು, ವಸುದೇವ ಕುಟುಂಬಕಂ ಎಂದು ಹೇಳಿ ಶ್ರೀಕೃಷ್ಣನನ್ನು ಆರಾಧಿಸುವ ಮಠದ ಪೀಠಾಧಿಪತಿಗಳು ಭಗವದ್ಗೀತೆಯನ್ನು ಮತ್ತೊಮ್ಮೆ ಓದಬೇಕು. ನ್ಯಾಯಾಂಗ, ಕಾರ್ಯಾಂಗ, ರಾಜ್ಯಾಂಗ ಯಾವುದೂ ಸರಿಯಿಲ್ಲ ಎಂದು ಹೇಳುವ ಶ್ರೀಗಳಿಗೆ ಯಾವ ಸರಕಾರ ತರಬೇತು ಎಂದು ಹೇಳುತ್ತಿದ್ದಾರೆ. ಉಡುಪಿ ಮಠದ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ, ಶ್ರೀಗಳು ಇಂತಹ ಕ್ಷುಲ್ಲಕ ಹೇಳಿಕೆ ನೀಡಬಾರದು. ಬಿಜೆಪಿಯವರು ಕೊಲೆ ವಿಚಾರದಲ್ಲಿ ರಾಜಕೀಯ ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಿ. ಕ್ಲುಲ್ಲಕ ರಾಜಕಾರಣ, ದ್ವೇಷದ ರಾಜಕಾರಣ ಬಿಡಿ ಎಂದು ಮಂಜುನಾಥ ಭಂಡಾರಿ ಆಗ್ರಹಿಸಿದರು.

ಶಾಸಕ ಹರೀಶ್ ಪೂಂಜ ಮುಸ್ಲಿಮರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ಹೇಳಿದ ಮಂಜುನಾಥ ಭಂಡಾರಿ, ಸಾಮಾಜಿಕ ಜಾಲ ತಾಣಗಳಲ್ಲಿಯೂ ಕೋಮು ಪ್ರಚೋದನೆ ನೀಡುವ ಬರಹಗಳನ್ನು ಬರೆಯುವವರು ಹಾಗೂ ಅದನ್ನು ಹಂಚುವವರ ಬಗ್ಗೆ ಶಿಕ್ಷೆಯಾಗಬೇಕು. ಈಬಗ್ಗೆ ಗೃಹ ಸಚಿವರ ಗಮನಕ್ಕೆ ತರುವಂತೆ ಜಿಲ್ಲಾ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಪೊಲೀಸ್ ವರಿಷ್ಟರನ್ನೂ ಭೇಟಿಯಾಗಿ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವವರ ವಿರುದ್ಧ ಸ್ವಯಂ ಪೇರಿತವಾಗಿ ಪ್ರಕರಣ ದಾಖಲಿಸಲು ತಿಳಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪದ್ಮರಾಜ್, ಜಿ.ಎ. ಬಾವ, ರಕ್ಷಿತ್ ಶಿವರಾಂ, ಮಿಥುನ್ ರೈ, ಇನಾಯತ್ ಅಲಿ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ವಿಕಾಸ್ ಶೆಟ್ಟಿ, ಸುಧೀರ್ ಟಿ.ಕೆ., ಲಾರೆನ್ಸ್ ಡಿಸೋಜ, ಕೃಷ್ಣಪ್ಪ, ಶುಭಾಸ್ ಕೊಳ್ನಾಡ್, ಸುಹಾನ್ ಆಳ್ವ, ಶುಭೋದಯ ಅಳ್ವ, ಯೋಗೀಶ್, ಕೃಷ್ಣ ಶೆಟ್ಟಿ, ಬಶೀರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article