
ಕುಡುಪು ಗುಂಪು ಹತ್ಯೆ ಪ್ರಕರಣ: ಎಸ್‌ಐಟಿ ಮೂಲಕ ಸಮಗ್ರ ತನಿಖೆಗೆ ಬಿ. ರಮಾನಾಥ ರೈ ಆಗ್ರಹ
ಮಂಗಳೂರು: ಕುಡುಪುವಿನಲ್ಲಿ ನಡೆದ ವಲಸೆ ಕಾರ್ಮಿಕನ ಗುಂಪು ಥಳಿತ, ಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ ಐಟಿ)ರಚನೆ ಸೂಕ್ತ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲು ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಿಯೋಗ ಶೀಘ್ರದಲ್ಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರನ್ನು ಭೇಟಿ ಮಾಡಲಿದೆ ಎಂದು ಮಾಜಿ ಸಚಿವ,ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಪು ಥಳಿತ ಹತ್ಯೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತಂದಿರುವ ಅಮಾನವೀಯ ಘಟನೆ. ಇಲ್ಲಿ ಹತ್ಯೆಯಾದ ವ್ಯಕ್ತಿಯ ಜಾತಿ, ಧರ್ಮ, ಮತವನ್ನು ಪರಿಗಣಿಸದೆ ಜಿಲ್ಲೆಯ ಜನತೆ ಖಂಡಿಸಬೇಕಾದ ಹೇಯ ಕೃತ್ಯ. ಇಂತಹ ದುಷ್ಕೃತ್ಯದಲ್ಲಿ ನೇರವಾಗಿ ಭಾಗಿಯಾದವರು, ಅದರ ಹಿಂದೆ ಇರುವವರು ಯಾರು ಎಂದು ತನಿಖೆ ನಡೆದು ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕಾದರೆ ಎಸ್‌ಐಟಿ ರಚನೆ ಸೂಕ್ತ. ಈ ಹಿಂದೆಯೂ ಮತೀಯ ದ್ವೇಷದ ಕೊಲೆಗಳಾದ ಸಂದರ್ಭದಲ್ಲಿ ನಾನು ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದೇನೆ. ಈ ಜಿಲ್ಲೆಯಲ್ಲಿ ಕೋಮು ಸೌಹಾರ್ದವನ್ನು ಕದಡಲು ಮತೀಯ ಶಕ್ತಿಗಳು ಪಬ್ ದಾಳಿ, ಚರ್ಚ್ ದಾಳಿಯಂತಹ ಘಟನೆಗಳನ್ನು ಮಾಡಿವೆ. ಇದರಲ್ಲಿ ಕೆಲವು ಆರೋಪಿಗಳ ಬಂಧನವಾದರೂ ಈ ಶಕ್ತಿಗಳಿಗೆ ಹಿಂದಿನಿಂದ ಪ್ರಚೋದನೆ ನೀಡುವರು ಶಿಕ್ಷೆಯಿಂದ ಪಾರಾಗಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ. ಜಿಲ್ಲೆಯಲ್ಲಿ ಗುಂಪು ಥಳಿತ,ಹತ್ಯೆ ಪ್ರಕರಣ ಪ್ರಥಮ ಇದನ್ನು ಮೊಳಕೆಯಲ್ಲಿಯೇ ಚಿವುಟಿ ತೆಗೆಯಬೇಕಾಗಿದೆ. ಮುಂದೆ ಇಂತಹ ಘಟನೆ ನಡೆಯಬಾರದು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಮೂಲಕವೇ ತನಿಖೆ ನಡೆಸುವುದು ಸೂಕ್ತ ಎಂದರು.
ಪಾಕಿಸ್ತಾನ ಝಿಂದಾಬಾದ್ ಎಂದವರು ಯಾರು ಎನ್ನುವ ಪ್ರಶ್ನೆಗೆ ಅಲ್ಲಿದ್ದ ಪ್ರತ್ಯಕ್ಷ ಸಾಕ್ಷಿಗಳು ಮಾತ್ರ ಉತ್ತರ ನೀಡಲು ಸಾಧ್ಯ .ಈ ಪ್ರಕರಣದ ತನಿಖೆ ಪೊಲೀಸರಿಂದ ಸ್ವಲ್ಪ ವಿಳಂಬವಾಗಿದೆ. ಗೃಹ ಸಚಿವರು ಪೊಲೀಸರು ನೀಡಿದ ಆರಂಭಿಕ ಮಾಹಿತಿಯ ಆಧಾರದಲ್ಲಿ ಹೇಳಿಕೆ ನೀಡಿರುವ ಸಾಧ್ಯತೆ ಇದೆ. ಪೊಲೀಸ್ ಗುಪ್ತಚರ ವಿಭಾಗದ ಮೂಲಕ ಗುಂಪು ಹತ್ಯೆಯ ವಿವರ ಸಾರ್ವಜನಿಕರಿಗೆ ತಿಳಿಯುವ ಮೊದಲು ತಿಳಿದುಕೊಳ್ಳಬೇಕಾಗಿತ್ತು. ಈ ನಿಟ್ಟಿನಲ್ಲಿ ವಿಳಂಬವಾಗಿದೆ. ಸರಕಾರ ತನಿಖೆ ನಡೆಸುತ್ತಿದೆ. ಅದರ ಮೇಲೆ ನಮಗೆ ವಿಶ್ವಾಸವಿದೆ. ಈ ಗುಂಪು ಥಳಿತ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಾದರೆ ಸಮರ್ಥ ಅಧಿಕಾರಿಗಳ ಮೂಲಕ ತನಿಖೆ ನಡೆದರೆ ಮಾತ್ರ ಸಾಧ್ಯ. ಈ ಹಿಂದೆ ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಎಂಬ ದಾರಿಹೋಕನನ್ನು ಗಡ್ಡ ಬಿಟ್ಟಿದ್ದ ಆತ ಮುಸ್ಲಿಂ ಎಂದು ಭಾವಿಸಿ ಕೊಲೆ ಮಾಡಿರುವುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಇದು ಅಪಾಯಕಾರಿ ಬೆಳವಣಿಗೆ. ಈ ರೀತಿ ಧರ್ಮ, ಮತಗಳ ಆಧಾರದಲ್ಲಿ ಗುರಿ ಮಾಡಿ ನಡೆದ ದುಷ್ಕೃತ್ಯಗಳಿಂದ ದೇಶಕ್ಕೆ ಸಾಕಷ್ಟು ರಾಜಕೀಯ ಸಾಮಾಜಿಕ ಮುಖಂಡರನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳ ಬೇಕಾಗಿದೆ. ಕುಡುಪು ವಾಮಂಜೂರು ಪ್ರದೇಶದಲ್ಲಿ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಮುಖ್ಯ ಮಂತ್ರಿಬಳಿ ನಿಯೋಗ ತೆರಳಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕೆ.ಅಶ್ರಫ್, ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಬೇಬಿ ಕುಂದರ್, ಅಬ್ಬಾಸ್ ಅಲಿ, ಯೋಗೀಶ್ ಕುಮಾರ್, ಶಬ್ಬೀರ್ ಸಿದ್ದಕಟ್ಟೆ, ಫಾರೂಕ್, ನಿತ್ಯಾನಂದ ಶೆಟ್ಟಿ, ಪಿಯೂಸ್ ರೋಡ್ರಿಗಸ್, ಇಬ್ರಾಹಿಂ ನವಾಜ್, ಮಂಜುಳಾ ನಾಯಕ್ ಉಪಸ್ಥಿತರಿದ್ದರು.