
ಗೃಹ ಸಚಿವರ ರಾಜೀನಾಮೆಗೆ ಎಸ್‌ಡಿಪಿಐ ಆಗ್ರಹ
ಮಂಗಳೂರು: ಮಂಗಳೂರಿನಲ್ಲಿ ಗುಂಪು ಥಳಿತದಿಂದ ಹತ್ಯೆಗೀಡಾದ ವಲಸೆ ಕಾರ್ಮಿಕ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ತಕ್ಷಣ ಆ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ ಆಗ್ರಹಿಸಿದ್ದಾರೆ.
ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗೃಹ ಸಚಿವ ಪರಮೇಶ್ವರ ಅವರು ಹತ್ಯೆಗೀಡಾದ ವ್ಯಕ್ತಿಯ ಬಗ್ಗೆ ಸುಳ್ಳು ಆರೋಪ ಮಾಡಿ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇಂತಹ ಅಸಮರ್ಥ ಗೃಹ ಸಚಿವರ ರಾಜೀನಾಮೆಯನ್ನು ತಕ್ಷಣ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಡೆಯಬೇಕು ಎಂದು ಆಗ್ರಹಿಸಿದರು.
ಡಾ.ಜಿ. ಪರಮೇಶ್ವರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ ಅವರು ದ.ಕ. ಜಿಲ್ಲೆಗೆ ಪ್ರವೇಶಿಸುವಾಗ ಅವರನ್ನು ಮುಸ್ಲಿಮರು ಸೂಕ್ತ ರೀತಿಯಲ್ಲಿ ಸ್ವಾಗತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೃಹ ಸಚಿವರ ಹೇಳಿಕೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಂಘ ಪರಿವಾರದ ಸಮ್ಮಿಶ್ರ ಸರಕಾರ ಇದೆಯೋ ಎಂಬ ಸಂಶಯ ಮೂಡುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ವಿಷ ಬೀಜ ಬಿತ್ತುವ ಡಾ. ಜಿ.ಪರಮೇಶ್ವರ ಅವರಂತಹ ಸಚಿವರು ಸಮಾಜವಾದಿ ನಿಲುವಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಇರಬಾರದು ಎಂದರು.
ಪರಮೇಶ್ವರ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣದಿಂದಾಗಿ ಇಂತಹ ಹೇಳಿಕೆ ನೀಡಿರಬಹುದು ಎಂದ ಅವರು, ಕ್ಷುಲ್ಲಕ ಕಾರಣಕ್ಕಾಗಿ ಗುಂಪು ಹತ್ಯೆ ನಡೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯಕ್ತ ಅನುಪಮ್ ಅಗ್ರವಾಲ್ ಹೇಳಿಕೆ ನೀಡಿದ್ದಾರೆ. ಕ್ಷುಲ್ಲಕ ಕಾರಣ ಏನು? ಎಂದು ಪ್ರಶ್ನಿಸಿದ ಜಲೀಲ್ ಅವರು ಪ್ರಕರಣವನ್ನು ಸರಿಯಾಗಿ ನಿಭಾಯಿಸದ ಪೊಲೀಸ್ ಠಾಣೆಯ ನಿರೀಕ್ಷಕರನ್ನು ಅಮಾನತು ಮಾಡಬೇಕು ಮತ್ತು ಗುಂಪು ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿ ರವೀಂದ್ರ ನಾಯಕ್ ಭಾಗಿಯಾಗಿದ್ದಾರೆಂಬ ಆರೋಪವಿದ್ದು, ಆತನನ್ನು ಬಂಧಿಸುವಂತೆ ಸರಕಾರವನ್ನು ಆಗ್ರಹಿಸಿದರು.
ಗುಂಪು ಹತ್ಯೆಗೀಡಾದ ವ್ಯಕ್ತಿಯ ಬಾಯಿಗೆ ದುಷ್ಕರ್ಮಿಗಳು ಮಣ್ಣು ಹಾಕಿದ್ದಾರೆ. ಆತನ ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿದ್ದಾರೆ ಎಂದು ಹೇಳಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಪ್ರಮುಖರಾದ ನಿಸಾರ್ ಅಹ್ಮದ್, ಸಿದ್ದೀಕ್ ಬೆಂಗ್ರೆ, ಅಕ್ಬರ್ ಕುದ್ರೋಳಿ ಉಪಸ್ಥಿತರಿದ್ದರು.