ಅಬ್ಬರದ ಮಳೆಗೆ ತತ್ತರಿಸಿದ ಜನತೆ: ಮುಳುಗಿದ ಕುಮಾರಧಾರ

ಅಬ್ಬರದ ಮಳೆಗೆ ತತ್ತರಿಸಿದ ಜನತೆ: ಮುಳುಗಿದ ಕುಮಾರಧಾರ


ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮೂರು ದಿನಗಳ ಹಿಂದೆ ಆರಂಭಗೊಂಡ ಮಳೆ ಇಂದು ಕೂಡಾ ಅಬ್ಬರಿಸಿದೆ. ಅಬ್ಬರದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. 

ನಿರಂತರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಕೃತಕ ನೆರೆಯಾಗಿದೆ. ನೀರು ರಸ್ತೆಗಳಲ್ಲಿ ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲಲ್ಲಿ ಮಳೆ ನೀರು ಮನೆಗೆ ನುಗ್ಗಿದೆ. ಜಿಲ್ಲೆಯ ವಿವಿದೆಡೆ ಭೂ ಕುಸಿತ, ಮನೆಯ ಗೋಡೆ ಕುಸಿತ, ಮರಗಳು ಉರುಳಿರುವ ಘಟನೆಗಳು ಸಂಭವಿಸಿದೆ. ಮಳೆಗೆ ವಿದ್ಯುತ್ ಹಾಗೂ ಅಂತರ್ಜಾಲ ಸೇವೆಯಲ್ಲಿ ವ್ಯತ್ಯಯವಾಗಿದೆ.

ಮುಳುಗಿದ ಕುಮಾರಧಾರ..

ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕುಮಾರಧಾರಾ ಸ್ನಾನ ಘಟ್ಟ ಮುಳುಗಡೆಯಾಗಿದೆ. .ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಭಕ್ತರು ಸ್ನಾನಘಟ್ಟದ ಬಳಿ ನದಿಗೆ ಇಳಿಯದಂತೆ ಸೂಚಿಸಲಾಗಿದೆ. ಭಕ್ತರು ಕೇವಲ ನದಿ ನೀರನ್ನು ತಲೆಗೆ ಚಿಮುಕಿಸಲು ಮಾತ್ರ ಅನುಮತಿ ನೀಡಲಾಗಿದೆ. 

ದೇವಸ್ಥಾನದ ಆಡಳಿತ ಸ್ನಾನಘಟ್ಟದ ಸುತ್ತ ಹಗ್ಗವನ್ನು ಕಟ್ಟಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿದೆ. ಪ್ರಕೃತಿ ವಿಕೋಪ ತಡೆ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ

ರೆಡ್ ಅಲರ್ಟ್..

ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು ಇಂದೂ ಕೂಡಾ ರೆಡ್ ಅಲರ್ಟ್ ಜಾರಿಯಾಗಿದೆ. ಬಿಟ್ಟು ಬಿಡದೇ ನಿರಂತರವಾಗಿ ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆ ಸುರಿಯುತ್ತಿದೆ

ಮಳೆ ಅಬ್ಬರದ ಹಿನ್ನೆಲೆಯಲ್ಲಿ ಪುತ್ತೂರಿಗೆ 25 ಸಿಬ್ಬಂದಿಯ ಎನ್‌ಡಿಆರ್‌ಎಫ್ ಸಿಬ್ಬಂದಿ ಆಗಮಿಸಿದ್ದಾರೆ. ಗಾಳಿ ಮಳೆ ಹಿನ್ನಲೆ ಅಧಿಕಾರಿಗಳಿಗೆ ಸರ್ವ ಸನ್ನದ್ಧ ಆಗಿರಲು ಸೂಚನೆ ನೀಡಲಾಗಿದೆ.

5 ದಿನಗಳ ಕಾಲ ಜಿಲ್ಲೆಗೆ ರೆಡ್ ಅಲರ್ಟ್ ಜಾರಿಯಾಗಿರುವ ಕಾರಣ ಅಪಾಯದಲ್ಲಿರುವ ಗುಡ್ಡ ಭಾಗದ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ಆದೇಶಿಸಲಾಗಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರುವ ಮೀನುಗಾರಿಕಾ ಬೋಟ್‌ಗಳು ತಕ್ಷಣ ದಡಕ್ಕೆ ಬಂದು ನವಮಂಗಳೂರು ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article