ಕ್ಷಣಿಕ ಆನಂದದ ಬದಲು ಶಾಶ್ವತತೆ ಕಡೆಗೆ ಚಿಂತಿಸಿ: ಸ್ವಾಮಿ ಯುಗೇಶಾನಂದಜಿ

ಕ್ಷಣಿಕ ಆನಂದದ ಬದಲು ಶಾಶ್ವತತೆ ಕಡೆಗೆ ಚಿಂತಿಸಿ: ಸ್ವಾಮಿ ಯುಗೇಶಾನಂದಜಿ


ಮಂಗಳೂರು: ಜೀವನದಲ್ಲಿ ಕಷ್ಟಪಟ್ಟಾಗ ಮಾತ್ರ ಆನಂದ ಲಭಿಸುತ್ತದೆ. ಕ್ಷಣಿಕ ಆನಂದ ದೀರ್ಘಕಾಲದವರೆಗೂ ಇರುವುದಿಲ್ಲ. ಸಾತ್ವಿಕ ಆನಂದ, ತಾಮಸಿಕ ಆನಂದ, ರಾಜಸಿಕ ಆನಂದವು ಮನುಷ್ಯನನ್ನು ಮಂಕುಬಡಿಯುವಂತೆ ಮಾಡುತ್ತದೆ ಎಂದು ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜಿ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಿವೇಕ ಜಾಗೃತಿ ವಿಶೇಷ್ಯ ಉಪನ್ಯಾಸ ಮತ್ತು ಸ್ವಾಮಿ ವಿವೇಕನಂದರ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ಮತ್ತೊಬ್ಬರನ್ನು ಮೆಚ್ಚಿಸುವುದೇ ಆನಂದ ಎಂದು ತಿಳಿಯುತ್ತಾರೆ. ಹೆಣ್ಣು, ಗಂಡು ಒಟ್ಟಿಗೆ ಓಡಾಡುವುದು, ಮೊಬೈಲ್‌ನಲ್ಲಿ ಅತಿ ಹೆಚ್ಚು ಸಮಯ ಕಳೆಯುವುದು, ವಿಪರೀತ ನಿದ್ದೆ ಮಾಡುವುದು ಇದೆಲ್ಲವೂ ಕ್ಷಣಿಕ. ಆ ಕ್ಷಣಕ್ಕೆ ಆನಂದ ಸಿಗಬಹುದು. ಆದರೆ ಭವಿಷ್ಯದಲ್ಲಿ ದುಃಖ ಪಡಬೇಕಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಪ್ರತಿ 40 ಜನರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಅಲ್ಲದೇ, ಇದಕ್ಕಾಗಿ ಔಷಧ ಸೇವನೆಗೂ ಮುಂದಾಗುತ್ತಿದ್ದಾರೆ. ಇದೆಲ್ಲವೂ ದೇಹದ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆಯೇ ಹೊರತು ಮಾನಸಿಕವಾಗಿ ಆನಂದ ದೊರೆಯುವುದಿಲ್ಲ. ಧನಾತ್ಮಕ ಚಿಂತನೆಗಳ ಮೂಲಕ ಮನಸ್ಥಿತಿಯನ್ನು ಉನ್ನತವಾಗಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಮನಸ್ಸೇ ಎಲ್ಲದಕ್ಕೂ ಮೂಲ ಹಾಗಾಗಿ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಮನುಷ್ಯನಿಗೆ ಯಾವುದರ ಬಗ್ಗೆಯೂ ತೃಪ್ತಿ ಇರುವುದಿಲ್ಲ. ಅವನು ಸಂತೋಷ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಚಲಿಸುತ್ತಾನೆ. ಆದರೂ, ಶಾಶ್ವತ ಆನಂದ ಮಾತ್ರ ಲಭ್ಯವಾಗುವುದಿಲ್ಲ. ಆದ್ದರಿಂದ ಜೀವನದ ಏಳಿಗೆಗಾಗಿ ಸ್ವಾಮಿ ವಿವೇಕಾನಂದರ ವಿವೇಕ ಚಿಂತನೆಗಳನ್ನು ಆಲಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ, ವಿದ್ಯಾರ್ಥಿ ಸಂಘದ ಸಹನಿರ್ದೇಶಕ ಪ್ರೊ. ಜಯವಂತ ನಾಯಕ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್, ಕಾರ್ಯದರ್ಶಿ ಕೀರ್ತನ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article