
ಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನ ಶ್ರುತ ಪಂಚಮಿ: ಭಟ್ಟಾರಕ ಸ್ವಾಮೀಜಿ
ಮೂಡುಬಿದಿರೆ: ಶ್ರುತ ಪಂಚಮಿ ಜೈನರ ಪವಿತ್ರ ಹಬ್ಬವಾಗಿದ್ದು ಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನವಾಗಿದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು. ಮೂಡುಬಿದಿರೆ ಜೈನಮಠದ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಶನಿವಾರ ನಡೆದ ಶ್ರುತ ಪಂಚಮಿ ಪ್ರಯುಕ್ತ ಧಾರ್ಮಿಕ ಸಭೆ ನಡೆಯಲ್ಲಿ ಆಶೀರ್ವಚನ ನೀಡಿದರು.
ಧರಸೇನ ಆಚಾರ್ಯರು ತನ್ನ ಶಿಷ್ಯರಾದ ಭೂತಬಲಿ ಮತ್ತು ಪುಷ್ಪದಂತರಿಂದ ತರಿಸಿದಂತಹ ಪವಿತ್ರಗ್ರಂಥ ಷ್ಟಟ್ಕಾಂಡ ಆಗಮ ಪೂರ್ಣಗೊಳಿಸದಂತಹ ದಿನವೂ ಹೌದಾಗಿದೆ ಎಂದರು.
ವಾಣಿ ಅಭಯ ಕುಮಾರ್ ರಚಿಸಿದ ಜೈನ ಶೋಭಾನೆ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
24 ತೀರ್ಥಂಕರರ ನೆನಪಿಸುವಂತೆ 24 ಬೆಳ್ಳಿಕಟ್ಟದಿಂದ ಹಾಕಿದ ತಾಳೆ ಬೀಜ ಹಾಗೂ ತಾಳೆ ಬೀಜದಲ್ಲಿ ಮಾಡಿದ ಲೇಖನಿಯನ್ನು ಇತಿಹಾಸ ತಜ್ಞ ಡಾ.ಕೃಷ್ಣಯ್ಯ ಅವರು ಭಟ್ಟಾರಕ ಸ್ವಾಮೀಜಿಯವರಿಗೆ ನೀಡಿದರು.
ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಪ್ರಮುಖರಾದ ಬಾಹುಬಲಿ ಪ್ರಸಾದ್, ಉಷಾ ಜಯವೀರ್, ವೃಂದಾ ರಾಜೇಂದ್ರ, ಶ್ವೇತಾ ಜೈನ್, ಬೆಟ್ಕೇರಿ ವೀಣಾ ರಘುಚಂದ್ರ, ನಿರಂಜನ್ ಅಲಂಗಾರು, ಸನತ್ ಕುಮಾರ್, ಶಕುಂತಳಾ, ಡಾ. ಎಸ್. ಪಿ ವಿದ್ಯಾ ಕುಮಾರ್, ದಿವ್ಯವಾಣಿ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವಾನ್ 1008 ಶ್ರೀಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ, ಪೂಜೆ, ನವ ದೇವತಾ ಪೂಜೆ, ಗಣಧರ ಪೂಜೆ, ಸರಸ್ವತಿ ಪೂಜೆ, ಶಾಸ್ತ್ರದಾನ ನಡೆಯಿತು. ಧವಳತ್ರಯ ಜೈನಕಾಶಿ ಟ್ರಸ್ಟ್, ಜೈನಮಠ ಟ್ರಸ್ಟ್ ಜಂಟಿ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.