
ಜಿಲ್ಲಾ ಬಂದ್ ವೇಳೆ ಅಂಗಡಿಮುಚ್ಚಲು ಬಲವಂತ: ಅಕ್ರಮಕೂಟದ 30 ಮಂದಿಯ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಮಂಗಳೂರಿನ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ನಿಷೇಧಾಜ್ಞೆ ಇದ್ದಂತಹ ಸಂದರ್ಭದಲ್ಲಿ 30 ಮಂದಿಯ ಅಕ್ರಮಕೂಟವೊಂದು ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಲು ದೊಂಬಿ ನಡೆಸಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿರುವ ಕಾರಣಕ್ಕೆ ಅವರ ವಿರುದ್ಧ ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವಹಿಂದೂ ಪರಿಷತ್ ಬಜರಂಗದಳ ಹಾಗೂ ಮತ್ತಿತರ ಹಿಂದೂಪರ ಸಂಘಟನೆಗಳು ಜಿಲ್ಲಾ ಬಂದ್‌ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಮೇ 2ರಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಮೇ 2 ರಿಂದ 5ರ ತನಕ ಜಿಲ್ಲಾಧಿಕಾರಿಯವರು ನಿಷೇದಾಜ್ಞೆ ಜಾರಿ ಮಾಡಿದ್ದರು. ಆದರೆ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆ ಸಮೀಪದ ಕೆಲ ವರ್ತಕರ ಅಂಗಡಿಗಳನ್ನು ಈ ಅಕ್ರಮಕೂಟ ಬಲವಂತವಾಗಿ ಮುಚ್ಚಿಸಿದ ಹಾಗೂ ಸಮಾನ ಉದ್ದೇಶದಿಂದ ದೊಂಬಿ ಎಬ್ಬಿಸಿ ಕಾನೂನುಪಾಲನೆಗೆ ತೊಡಕು ಉಂಟು ಮಾಡಿತ್ತು.
ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದ ವೇಳೆ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಸೂಚನೆ ನೀಡಿದರೂ ಈ ಸೂಚನೆಗಳನ್ನು ಉಲ್ಲಂಘಿಸುವ ಕೆಲಸ ಮಾಡಿದ್ದಾರೆ. ಈ ಕಾರಣಕ್ಕಾಗಿ ನಿಷೇಧಾಜ್ಞೆ ಉಲ್ಲಂಘನೆ, ದೊಂಬಿ ನಡೆಸಿದ ಪ್ರಕರಣ ದಾಖಲಿಸಿಕೊಂಡು 30 ಜನರ ಅಕ್ರಮಕೂಟದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.