
ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇಗುಲದ ಪ್ರತಿಷ್ಠಾ ವರ್ಧಂತಿ ಉತ್ಸವ ಸಂಪನ್ನ
Thursday, May 1, 2025
ಉಡುಪಿ: ಇಲ್ಲಿನ ಸಂತೆಕಟ್ಟೆಯ ರಾ.ಹೆ. 66ರ ಅಂಬಾಗಿಲು ಸಮೀಪದ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ಅಕ್ಷಯ ತೃತೀಯ ದಿನದಂದು ನಡೆಯುವ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಏ.30 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ಪುತ್ತೂರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ನೆರವೇರಿತು.
ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ, ಕಲಾ ಸಾನ್ನಿಧ್ಯಯುಕ್ತವಾಗಿ ದೇಗುಲದಲ್ಲಿ 'ಚಂಡಿಕಾಯಾಗ', ಶ್ರೀ 'ಸತ್ಯನಾರಾಯಣ ಪೂಜೆ', ಪೂರ್ಣಾಹುತಿ, ಮಧ್ಯಾಹ್ನ ವಿಶೇಷ ಹೂವಿನ ಅಲಂಕಾರ, ಮಂಗಳಾರತಿ ಮಹಾ ಪೂಜೆಯನ್ನು ದೇಗುಲದ ಅರ್ಚಕ ರಾಮಚಂದ್ರ ಗಾಂವಸ್ಕರ್ ನಡೆಸಿಕೊಟ್ಟರು.
ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆಯು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪ ಮತ್ತು, ಶ್ರೀ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಿತು.
ಸುಮಾರು 2 ಸಾವಿರ ಮಂದಿ ಶ್ರೀ ಮಾಸ್ತಿ ಅಮ್ಮನ ಅನ್ನ ಪ್ರಸಾದ ಸ್ವೀಕರಿಸಿದರು.
ಸಾಯಂಕಾಲ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿಯಿಂದ ಭಜನೆ, ರಾತ್ರಿ ಮಹಾಪೂಜೆ, ನಂತರ ಲಘು ಉಪಹಾರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವಿನೋದ್ ಗಾಂವಸ್ಕರ್, ವಾಸುದೇವ ಗಾಂವಸ್ಕರ್, ಗಣೇಶ್ ಗಾಂವಸ್ಕರ್, ಶ್ರೀನಿವಾಸ್ ನಾಯಕ್, ಗಣಪತಿ ನಾಯಕ್ ಮತ್ತು ಗಾಂವಸ್ಕರ್ ಕುಟುಂಬಸ್ಥರು ಹಾಗೂ ನಂಬಿದ ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.