
ಗುಡ್ಡಕುಸಿದು ಮೃತಪಟ್ಟವರ ಮನೆಗಳಿಗೆ ಉಸ್ತುವಾರಿ ಸಚಿವರು ಭೇಟಿ
Friday, May 30, 2025
ಉಳ್ಳಾಲ: ಎಡೆಬಿಡದೆ ಸುರಿದ ಮಳೆಗೆ ಗುಡ್ಡ ಜರಿದು ಮರ ಬಿದ್ದ ಪರಿಣಾಮ ಮೂವರು ಮೃತಪಟ್ಟ ಕಾಂತಪ ಪೂಜಾರಿ ಹಾಗೂ ಗುಡ್ಡ ಜರಿದು ಮೃತಪಟ್ಟ ಕಾನಕರೆ ನಿವಾಸಿ ನೌಶಾದ್‌ರ ಪುತ್ರಿ ಫಾತಿಮಾ ನಯೀಮ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪರೀತ ಮಳೆಯಿಂದ ಗುಡ್ಡೆ ಜರಿದು ಬಿದ್ದು ಕೋಡಿ ನಿವಾಸಿ ಸೀತಾರಾಮ ಅವರ ಮನೆಯಲ್ಲಿ ಮೂವರು ಮೃತಪಟ್ಟು, ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಹಾಗೂ ಕಾನಕರೆಯಲ್ಲಿ ಬಾಲಕಿಯೊಬ್ಬಳು ಮೃತರಾದ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದರು.
ತೀರ್ವ ಹಾಗೂ ಭಾಗಶಃ ಹಾನಿಯಾದ, ನೀರು ನುಗ್ಗಿದ ಮನೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಪುನರ್ವಸತಿ ಕಲ್ಪಿಸುವ ಯೋಜನೆ ಸರ್ಕಾರದ ವತಿಯಿಂದ ಇದೆ. ಮುಂಜಾಗ್ರತಾ ಕ್ರಮವಾಗಿ ಒಂದು ನಿರ್ಧಾರ ಮಾಡಬೇಕಾಗಿದೆ. ಅದಕ್ಕಾಗಿ ಇಂದು ರಾತ್ರಿ ಸಭೆ ಇಟ್ಟಿದ್ದೇನೆ. ಈ ಸಭೆಯಲ್ಲಿ ಸೂಕ್ತ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.