34 ಪೌರಕಾರ್ಮಿಕರಿಗೆ ಪುರಸಭಾ ನಿಧಿಯಿಂದ ವೇತನ ನೀಡಲು ಬಿಜೆಪಿ ಆಕ್ಷೇಪ

34 ಪೌರಕಾರ್ಮಿಕರಿಗೆ ಪುರಸಭಾ ನಿಧಿಯಿಂದ ವೇತನ ನೀಡಲು ಬಿಜೆಪಿ ಆಕ್ಷೇಪ


ಬಂಟ್ವಾಳ: ಪುರಸಭೆಗೆ ನೇರ ನೇಮಕಾತಿಯಾಗಿರುವ 34 ಪೌರಕಾರ್ಮಿಕರ ವೇತನದಲ್ಲಿ ಪುರಸಭಾ ನಿಧಿಯಿಂದ ಆರ್ಧಭಾಗವನ್ನು ನೀಡಲು ಶುಕ್ರವಾರ ನಡೆದ ಬಂಟ್ವಾಳ ಪುರಸಭೆಯ ವಿಶೇಷ ಸಭೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ದಾಖಲಿಸಿದರೆ, ಆಡಳಿತಪಕ್ಷ ಬಹುಮತದಿಂದ ಅಂಗೀಕರಿಸಿತು.

ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಶೇಷ ಸಭೆಯಲ್ಲಿ ರಾಜ್ಯದ ಪೌರಾಡಳಿತ ನಿರ್ದೇಶನಾಲಯವು 2024 ಎ.7 ರಂದು ಸರಕಾರ ಹೊರಡಿಸಿದ ಸುತ್ತೋಲೆಯಂತೆ ನೇರ ನೇಮಕಾತಿಯಾದ 34 ಪೌರಕಾರ್ಮಿಕರಿಗೆ ಕನಿಷ್ಠ ವೇತನ 18 ಸಾ.ರೂ. ಹಾಗೂ ಸಂಕಷ್ಟ ಭತ್ತೆ 2 ಸಾ.ರೂ. ಬಿಡುಗಡೆ ಮಾಡಿದ್ದು, ಉಳಿಕೆ ಮೊತ್ತವನ್ನು ಪುರಸಭಾ ನಿಧಿಯಿಂದ ಭರ್ತಿಗೊಳಿಸಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿ ನಜೀರ್ ಅವರು ಸಭೆಗೆ ತಿಳಿಸಿದರು.

ಇದನ್ನು ಆಕ್ಷೇಪಿಸಿದ ಹಿರಿಯ ಸದಸ್ಯ ಗೋವಿಂದ ಪ್ರಭು ಅವರು, ಕರ್ನಾಟಕ ರಾಜ್ಯಪತ್ರದಲ್ಲಿ ಉಲ್ಲೇಖವಾದ ಅಂಶ ನಮಗೆ ಮುಖ್ಯವಾಗಿದೆ. ಶರಕಾರದ ಸುತ್ತೋಲೆಗಳು ದಿನಕ್ಕೊಂದು ಬರುತ್ತಲೇ ಇರುತ್ತದೆ.ಇದನ್ನು ಕೌನ್ಸಿಲ್ ಸಭೆ ಒಪ್ಪಬೇಕಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಇದೀಗ ಪೌರಕಾರ್ಮಿಕರನ್ನು ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ವರ್ಗ ಎಂದು ವಿಂಗಡಿಸಿ ವೇತನ ನೀಡುತ್ತಿರುವ ಕ್ರಮ ತನ್ನ 40 ವರ್ಷದ ಸದಸ್ಯತ್ವದ ಇತಿಹಾಸದಲ್ಲಿ ಇದೇ ಮೊದಲು ಕಂಡಿದ್ದೆನೆ. 34 ಮಂದಿ ನೇರ ನೇಮಕಾತಿಯಾದ ಪೌರಕಾರ್ಮಿಕರಿಗೆ ಕಳೆದ ಆಗಸ್ಟ್ ನಿಂದ ಇದುವರೆಗೆ ವೇತನ ಪಾವತಿಸಿದ ರೀತಿಯಲ್ಲೇ  ಮುಂದುವರಿಸುವಂತೆ ಮತ್ತು ಈ ಹಿಂದೆ ಶ್ರೀಧರ್ ಎಂಬವರು ಮುಖ್ಯಾಧಿಕಾರಿಯವರಿದ್ದಾಗ ಪೌರಕಾರ್ಮಿಕರಿಗೆ ವೇತನ ನೀಡಿರುವುದರ ಪ್ರತಿಯೊಂದನ್ನು ಗೋವಿಂದ ಪ್ರಭು ಅವರು ಸಭೆಯ ಗಮನಕ್ಕೆ ತಂದರು.

ಎಸ್‌ಎಫ್‌ಸಿ ಅನುದಾನವನ್ನು ಪೌರಕಾರ್ಮಿಕರ ವೇತನಕ್ಕೆ ಬಳಸಿದರೆ ಸದಸ್ಯರು ತಮ್ಮ ವಾಡ್೯ನಲ್ಲಿ ಅಭಿವೃದ್ಧಿ ಕೆಲಸ ಮಾಡುವುದಾದರೂ ಹೇಗೆ, ಕನಿಷ್ಠ ಚರಂಡಿಯ ಹೂಳೆತ್ತಲು ಸದಸ್ಯರಿಗೆ ಅನುದಾನಕ್ಕೆ ಬರ ಬಂದಿದೆ. ಜನರ ತೆರಿಗೆಯಿಂದ ಪುರಸಭಾ ನಿಧಿಗೆ ಬರುವ ಅನುದಾನವನ್ನು ಪೌರಕಾರ್ಮಿಕರ ವೇತನಕ್ಕೆ ಬಳಸಿದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರಲ್ಲದೆ ಸರಕಾರವೇ ಪೂರ್ತಿ ವೇತನ ಪಾವತಿಸಿ ಕ್ರಮಕೈಗೊಳ್ಳಲಿ ಎಂದು ಪ್ರಭು ಆಗ್ರಹಿಸಿದರು.

ಪುರಸಭಾನಿಧಿಗೆ ತೆರಿಗೆಯಿಂದ ಎಷ್ಟು ಹಣ ಸಂಗ್ರಹವಾಗುತ್ತದೆ. ಪೌರಕಾರ್ಮಿಕರಿಗೆ ಎಷ್ಟು ಭಾಗ ಹಣ ಕೊಡಬೇಕಾಗುತ್ತದೆ ಎಂದು ಸದಸ್ಯರಾದ ಮಹಮ್ಮದ್ ಶರೀಫ್, ಹರಿಪ್ರಸಾದ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಜೀರ್ ಅವರು 11.50 ಲಕ್ಷ ಸರಕಾರ ಪಾವತಿಸಿದರೆ ಉಳಿಕೆ 5 ರಿಂದ 6 ಲ.ರೂ. ಪುರಸಭಾ ನಿಧಿಯಿಂದ ಪಾವತಿಸಬೇಕಾಗುತ್ತದೆ ಎಂದರು.

ಮುಂದಿನ ತಿಂಗಳು ಜೆಸಿಬಿ, ಸಕ್ಕಿಂಗ್ ವಾಹನದ ಚಾಲಕ ನಿಯುಕ್ತಿಗೊಂಡರೆ ಅವರ ವೇತನವು ಸೇರಲಿದೆ ಎಂದು ಹರಿಪ್ರಸಾದ್ ಗಮನಸೆಳೆದರು.

ಪೌರಕಾರ್ಮಿಕರಿಗೆ ಮೊದಲ ಅದ್ಯತೆಯಲ್ಲಿ ವೇತನ ನೀಡುವಂತೆ ಸದಸ್ಯರ ಆಗ್ರಹವಾಗಿದೆ. ತಾನು ಕೂಡ ಈ ಬಗ್ಗೆ ಮುಖ್ಯಾಧಿಕಾರಿಯವರಿಗೆ ಸೂಚಿಸಿದ್ದೆನೆ. ಇನ್ನುಳಿದಂತೆ ಮುಖ್ಯಾಧಿಕಾರಿಯವರ ವಿವೇಚನೆಗೆ ಬಿಡಲಾಗುವುದು ಎಂದು ಅಧ್ಯಕ್ಷ ವಾಸುಪೂಜಾರಿ ರೂಲಿಂಗ್ ನೀಡಿದರು.

ಸರಕಾರದ ಆದೇಶವನ್ನು ಉಲ್ಲಂಘಿಸಿ ತಾನು ಮುಂದುವರಿಯಲು ಸಾಧ್ಯವಿಲ್ಲ, ಸರಕಾರದ ಸುತ್ತೊಲೆಯಂತೆ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

ಪುರಸಭಾ ನಿಧಿಯಿಂದ ಅನುದಾನ ಬಳಕೆ ಮಾಡುವುದಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ಅಕ್ಷೇಪ ಸಲ್ಲಿಸಿದರು. ಆಡಳಿತಪಕ್ಷ ಬಹುಮತದಿಂದ ಅಂಗೀಕರಿಸಿತು. ನಂದಾವರ ಶಾರದಾ ಹೈಸದಕೂಲ್ ಬಳಿ ಕಸ ಎಸೆಯುವುದನ್ನು ತಡೆಗಟ್ಟಲು ಈಗಾಗಲೇ ಕೈಗೊಂಡಿರುವ ನಿರ್ಣಯವನ್ನು ಮಾರ್ಪಾಟು ಮಾಡಿಕಾಮಗಾರಿ ನಡೆಸಲು ಸಭೆ ಅನುಮೋದನೆ ನೀಡಿತು. ಈ ವಿಚಾರದಲ್ಲಿ ಸದಸ್ಯ ಸಿದ್ದೀಕ್ ಕಾಮಗಾರಿ ಮಾರ್ಪಾಟಿನ ಉದ್ದೇಶವನ್ನು ಸಭೆಗೆ ತಿಳಿಸಿದರು.

ಉಪಾಧ್ಯಕ್ಷ ಮೋನೀಶ್ ಆಲಿ ಉಪಸ್ಥಿತರಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ವಿದ್ಯಾವತಿ, ಶಶಿಕಲಾ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಮೆನೇಜರ್ ರಜಾಕ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article