
ಚೇಳೂರಿನಿಂದ ಬಿ.ಸಿ.ರೋಡು ಮಾರ್ಗವಾಗಿ ಮಂಗಳೂರಿಗೆ ಸರಕಾರಿ ಬಸ್ ಪುನರಾರಂಭಕ್ಕೆ ಆಗ್ರಹ
ಬಂಟ್ವಾಳ: ಚೇಳೂರಿನಿಂದ ಬಿ.ಸಿ.ರೋಡು ಮಾರ್ಗವಾಗಿ ಮಂಗಳೂರಿಗೆ ಬೆಳಗ್ಗಿನ ಹೊತ್ತು ಸಂಜೆಯ ಹೊತ್ತು ಸಂಚರಿಸುತ್ತಿದ್ದ ಸರಕಾರಿ ಬಸ್ಸು ಸಂಚಾರ ವ್ಯವಸ್ಥೆಯನ್ನು ಪುನರಾರಂಭಿಸುವಂತೆ ಆಗ್ರಹಿಸಿ ಈ ಭಾಗದ ಗ್ರಾಮಸ್ಥರು ಕ.ರಾ.ರ.ಸಾ ನಿಗಮದ ಬಿ.ಸಿ.ರೋಡು ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಸಜೀಪಮೂಡ, ಸಜೀಪ ಮುನ್ನೂರು, ಸಜೀಪ ನಡು, ಸಜೀಪ ಪಡು, ಚೇಳೂರು ಗ್ರಾಮಸ್ಥರು ಮಾಜಿ ಜಿ.ಪಂ. ಸದಸ್ಯ ರವೀಂದ್ರಕಂಬಳಿ, ಮಾಜಿ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಅವರ ನೇತೃತ್ವದಲ್ಲಿ ಕ.ರಾ.ರ.ಸಾ ನಿಗಮದ ಬಿ.ಸಿ.ರೋಡು ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲುಸಿ ಒತ್ತಾಯಿಸಿದ್ದಾರೆ.
ಹಲವಾರು ವರ್ಷಗಳಿಂದ ಚೇಳೂರು, ಮೆಲ್ಕಾರ್, ಬಿ.ಸಿ.ರೋಡು ಮಾರ್ಗವಾಗಿ ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ಸು ಇತ್ತೀಚಿಗಿನ ಕೆಲ ಸಮಯದಿಂದ ಸ್ಥಗಿತಗೊಂಡಿದೆ. ಈ ಬಸ್ ಸಂಚಾರದಿಂದ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಂಗಳೂರಿಗೆ ಕೆಲಸಕ್ಕಾಗಿ ತೆರಳುತ್ತಿದ್ದ ಸಾರ್ವಜನಿಕರಿಗೆ ಅನುಕೂಲವಾಗುತಿತ್ತು. ಇದೀಗ ಈ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಚೇಳೂರಿನಿಂದ ಹಾಗೂ ಸಂಜೆ 6.30 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ ಹೊರಡುತ್ತಿದ್ದ ಸರಕಾರಿ ಬಸ್ಸುನ್ನು ಚೇಳೂರುನಿಂದ ಮಂಗಳೂರಿಗೆ ಸಂಚರಿಸಲು ಈ ಭಾಗದ ಹೆಚ್ಚಿನ ಜನರು ದಿನ ನಿತ್ಯ ಅವಲಂಬಿಸಿರುತ್ತಿದ್ದರು. ಹಾಗಾಗಿ ಈ ಬಸ್ ಸಂಚಾರವನ್ನು ಪುನಾರರಂಭಿಸುವಂತೆ ಅವರು ಒತ್ತಾಯಿಸಿದ್ದಾರೆ.
ಮಂಗಳೂರು-ಧರ್ಮಸ್ಥಳ ರೂಟ್ ಸಹಿತ ತಾಲೂಕಿನ ಕೆಲ ಭಾಗಗಳಿಗೆ ಸರಕಾರಿ ಬಸ್ ಸೌಲಭ್ಯ ಕೊರತೆಯಿದ್ದು, ಇದೀಗ ಶಾಲಾ-ಕಾಲೇಜ್ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಬಸ್ಸಿಗಾಗಿ ಸಾಕಷ್ಟು ಪರದಾಡುವ ದೃಶ್ಯಗಳು ಕಂಡುಬರುತ್ತಿದೆ.