
ಹಿಂದೂ ನಾಯಕರಿಗೆ ಕಿರುಕುಳ: ಶಾಸಕ ನಾಯ್ಕ್ ಖಂಡನೆ
ಬಂಟ್ವಾಳ: ಆರ್.ಎಸ್.ಎಸ್. ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಸಹಿತ ಅನೇಕ ಹಿಂದೂ ನಾಯಕರುಗಳನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುವ ಮೂಲಕ ಕಿರುಕುಳ ನೀಡುವುದಲ್ಲದೆ, ಜಿಲ್ಲೆಯಲ್ಲಿ ಮತ್ತೆ ಅಶಾಂತಿ ತಲೆದೋರುವಂತೆ ಮಾಡುವ ರಾಜ್ಯ ಸರಕಾರದ ನೀತಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ಇತ್ತೀಚಿಗೆ ಬಜಪೆಯಲ್ಲಿ ಕೊಲೆಯಾದ ಸುಹಾಶ್ ಶೆಟ್ಟಿ ಅವರ ಶೃದ್ದಾಂಜಲಿ ಸಭೆಯಲ್ಲಿ ಮಾಡಿದ ಭಾಷಣದಿಂದ ಮತೀಯ ಗುಂಪುಗಳ ನಡುವೆ ವೈಮನಸ್ಸು ಮಾಡುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಿರುವುದನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ರಾಜ್ಯ ಸರಕಾರ ಪೊಲೀಸ್ ಇಲಾಖೆಯ ಮುಖಾಂತರ ಮಾಡುತ್ತಿದೆಯೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ್ವೇಷ ಭಾಷಣದ ವಿಚಾರದಲ್ಲಿ ಕೇವಲ ಹಿಂದೂ ನಾಯಕರುಗಳನ್ನು ಗುರಿಯಾಗಿಸಿ ಪ್ರಕರಣ ದಾಖಲಿಸುವ ಸರಕಾರದ ಕ್ರಮವನ್ನು ಪ್ರಶ್ನಿಸಿರುವ ಶಾಸಕ ರಾಜೇಶ್ ನಾಯ್ಕ್ ಅವರು ಕಳೆದ ಏಳು ವರ್ಷಗಳಿಂದ ಶಾಂತವಾಗಿದ್ದ ತಾಲೂಕಿನಲ್ಲಿ ಮತ್ತೆ ಕೋಮು ದ್ವೇಷದ ವಿಷ ಬೀಜ ಬಿತ್ತಿದವರು ಯಾರು? ಹಿಂಸೆಗೆ ಪ್ರೇರಣೆ ನೀಡಿದವರು ಯಾರು? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದವರು ಯಾರು? ಇಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳದಿರುವ ಇಲಾಖೆಯ ನಡೆ ಹತ್ತು ಹಲವು ಸಂಶಯಕ್ಕೆಡೆ ಮಾಡಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕೇವಲ ಹಿಂದೂ ನಾಯಕರುಗಳನ್ನು ಟಾರ್ಗೆಟ್ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಕಿರುಕುಳ ನೀಡುತ್ತಿರುವುದು ನ್ಯಾಯಸಮ್ಮತವಾದುದಲ್ಲ, ನೈಜ ಆರೋಪಿಗಳಿಗೆ ಕಾನೂನುಪ್ರಕಾರವಾಗಿ ಶಿಕ್ಷೆಗೆ ಗುರಿಪಡಿಸಿ, ಇದರ ನೆಪದಲ್ಲಿ ಹಿಂದೂ ಮುಖಂಡರು,ಹಿರಿಯರಿಯರಿಗೆ ಸುಖಾಸುಮ್ಮನೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರಕಾರ ಪೊಲೀಸ್ ಇಲಾಖೆಯ ಮೂಲಕ ಸುಳ್ಳು ಕೇಸುಗಳನ್ನು ಹಾಕಿ ಹಿಂದೂ ನಾಯಕರುಗಳನ್ನು ಕಟ್ಟಿಹಾಕುವ ಕನಸು ಕಂಡರೆ ಅದು ಸಾಧ್ಯವಿಲ್ಲ, ಓಟ್ ಬ್ಯಾಂಕ್ ರಾಜಕಾರಣ ಬಿಟ್ಟು ಜಿಲ್ಲೆಯಲ್ಲಿ ಶಾಂತಿ ನೆಲೆಯಾಗುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಿ ಮಾಡಲಿ ಎಂದು ಶಾಸಕ ರಾಜೇಶ್ ನಾಯ್ಕ್ ಒತ್ತಾಯಿಸಿದ್ದಾರೆ.