
ಪೊಲೀಸರ ಅತಿರೇಕದ ಕ್ರಮ ಪ್ರಭು ಖಂಡನೆ
ಬಂಟ್ವಾಳ: ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ನೆಪದಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಧ್ಯರಾತ್ರಿ ಹಿಂದೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರ ಮನೆ ಬಾಗಿಲು ತಟ್ಟಲು ತಮ್ಮ ಠಾಣಾವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಲಾದ ಅತಿರೇಕದ ಕ್ರಮವನ್ನು ಖಂಡಿಸಿರುವ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಅವರುಇದನ್ನು ತಕ್ಷಣ ನಿಲ್ಲಿಸಿ ಸಾರ್ವಜನಿಕರಲ್ಲಿ ನಿರ್ಭಯ ವಾತಾವರಣ ಮೂಡುವಂತ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ದ.ಕ. ಜೆಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಇತ್ತೀಚಿಗೆ ಕೊಲೆ ಮತ್ತಿತರರ ಗಂಭೀರ ಪ್ರಕರಣಗಳು ನಡೆದಿರುವ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ನೆಪದಲ್ಲಿ ದ.ಕ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರ ಮನೆಗಳನ್ನು ಪೊಲೀಸರು ಸಂಪರ್ಕಿಸಿ ಜಿ.ಪಿ.ಎಸ್. ಪೋಟೋ ತೆಗೆಸಲು ಹೊರಡಿಸಿದ ಆದೇಶಿಸಿದ್ದಾರೆ.
ಇದರನ್ವಯ ಪೊಲೀಸರು ಮಧ್ಯರಾತ್ರಿ ಸಂಬಂಧಪಟ್ಟವರ ಮನೆಗಳ ಬಾಗಿಲು ಬಡಿದು ಜಿ.ಪಿ.ಎಸ್ ಪೋಟೋ ತೆಗೆಸಿಕೊಂಡು ಬರುತ್ತಿರುವುದರಿಂದ ಅಮಾಯಕರ ಪೋಷಕರು ಹಾಗೂ ವೃದ್ದ ತಂದೆ, ತಾಯಿ, ಕುಟುಂಬಸ್ಥರು ಭಯಭೀತರಾಗುತ್ತಿದ್ದಾರಲ್ಲದೆ ಕೆಲವೊಂದು ಮನೆಯಲ್ಲಿನ ವಯೋವೃದ್ದರು ದಿಗ್ಬ್ರಮೆಗೊಂಡು ಆಹಾರ ಸರಿಯಾಗಿ ತೆಗೆದುಕೊಳ್ಳದೆ ಆರೋಗ್ಯದ ಮೇಲೆ ಏರುಪೇರು ಆಗುವ ಸಾಧ್ಯತೆಗಳಿವೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಇದುವರೆಗೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಅಮಾಯಕರ ಮನೆಗಳಿಗೆ ನಡುರಾತ್ರಿ ಪೋಲಿಸರು ಭೇಟಿ ಕೊಡುತ್ತಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಹಿರಿಯರು ಜನಸ್ನೇಹಿ ಪೊಲೀಸ್ ಇಲಾಖೆಯ ಮೇಲಿಟ್ಟಿರುವ ಗೌರವಕ್ಕೆ ಚ್ಯುತಿ ಉಂಟಾಗುವ ಸಂಭವ ಇದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಘಟನೆಯ ಪ್ರಮುಖರ ಮನೆ ಭೇಟಿ ಮತ್ತು ಜಿ.ಪಿ.ಎಸ್. ಪೋಟೋ ತೆಗೆಯುವುದನ್ನು ರಾತ್ರಿಯ ಬದಲು ಹಗಲಿನಲ್ಲಿಯೇ ಹೋಗವುದರೊಂದಿಗೆ ಹಾಗೂ ಯಾವುದರಲ್ಲೂ ಸಂಬಂಧ ಪಡದ ವ್ಯಕ್ತಿಗಳ ಮನೆ ಸಂಪರ್ಕ ಕೈಬಿಟ್ಟು ನಾಗರೀಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇಷ್ಟರವರೆಗೆ ಯಾವುದೇ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳದವರ ಮನೆ ಭೇಟಿ, ಫೋಟೋ ತೆಗೆಯುವುದು ಔಚಿತ್ಯ ಪೂರ್ಣ ಲಕ್ಷಣವಲ್ಲ, ಇದು ಸಾರ್ವಜನಿಕರನ್ನು ಉದ್ದೇಶಪೂರ್ವಕವಾಗಿಯೇ ಇಲಾಖೆ ರೊಚ್ಚಿಗೆಬ್ಬಿಸುವಂತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯಗಳಲ್ಲಿ ವ್ಯಕ್ತವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿರುವ ಅವರು ಈ ರೀತಿಯ ಪೊಲೀಸರ ರಾತ್ರಿ ಸಂಪರ್ಕದ ಕೆಲಸದಿಂದಾಗಿ ಕರಾವಳಿ ದಕ್ಷಿಣ ಕನ್ನಡದ ಈಗಿನ ಪರಿಸ್ಥಿತಿ ಜಮ್ಮು ಕಾಶ್ಮೀರದಂತಾಗಿದೆ. ಆರ್‌ಎಸ್‌ಎಸ್ ಹಿರಿಯ ನೇತಾರರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಸೇರಿದಂತೆ ಇತರ ಹಿಂದೂ ನಾಯಕರ ಮೇಲೆ ದಾಖಲಾಗಿರುವ ಪ್ರಕರಣದ ಬಗ್ಗೆಯು ಪುನರ್ ಪರಿಶೀಲಿಸುವಂತೆಯು ಮನವಿಯಲ್ಲಿ ಒತ್ತಾಯಿಸಿದ್ದಾರೆ.