
ಸಮಿತ್ ರಾಜ್ ದರೆಗುಡ್ಡೆ ಬಂಧನ ಹಿ.ಜಾ.ವೇ. ಮಂಗಳೂರು ಗ್ರಾಮಾಂತರ ಜಿಲ್ಲೆ ಖಂಡನೆ
ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಅವರನ್ನು ರಾಜಕೀಯ ಪ್ರೇರಿತವಾಗಿ ಬಂಧಿಸಿರುವ ಕ್ರಮವನ್ನು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆ ತೀವ್ರವಾಗಿ ಖಂಡಿಸಿದೆ.
6 ತಿಂಗಳ ಹಿಂದೆ ನಡೆದ ಬಸ್ ಚಾಲಕನ ಅಜಾಗರೂಕತೆಯಿಂದ ಬೈಕ್‌ಗೆ ಮತ್ತು ರಿಕ್ಷಾಕ್ಕೆ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಸವಾರರಿಗೆ ಬಸ್ ಮಾಲಿಕನಿಂದ ಸ್ಥಳದಲ್ಲೇ ಪರಿಹಾರ ಕೊಡಿಸಲಾಗಿತ್ತು ಎಂದು ಹಿ.ಜಾ.ವೇ.ಯ ಮಂಗಳೂರು ಗ್ರಾಮಾಮಕತರ ಜಿಲ್ಲಾ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಹಾರದ ಹಣ ಬಸ್ ಮಾಲೀಕರು ಬಡ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬಸ್ಸಿಗೆ ಹಾನಿ ಮಾಡಿದ್ದರು. ಈ ಬಗ್ಗೆ ಬಸ್ ಮಾಲಿಕ ಠಾಣೆಗೆ ದೂರು ನೀಡಿದ್ದು, 6 ತಿಂಗಳಿನಿಂದ ಪೊಲೀಸರು ಈ ಬಗ್ಗೆ ಯಾವುದೇ ವಿಚಾರಣೆ ನಡೆಸದೇ ಏಕಾಏಕಿ ಸಮಿತ್ ರಾಜ್‌ರನ್ನು ಬಂಧನ ಮಾಡಲಾಗಿದೆ ಎಂದು ಹಿ.ಜಾ.ವೇ.ಯ ಪ್ರಕಟಣೆಯಲ್ಲಿ ಆರೋಪಿಸಿದೆ.
ಈ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದ್ದು ಹಿಂದೂ ನಾಯಕರನ್ನು ಧಮನಿಸುವ ಎರಡನೇ ಸುತ್ತಿನ ನಾಟಕಕ್ಕೆ ಇಲಾಖೆಯ ಮೂಲಕ ಚಾಲನೆ ನೀಡಲಾಗಿದೆ. ಮತ್ತು ನೋಂದ ಬಡ ಕುಟುಂಬಕ್ಕೆ ಪರಿಹಾರ ತೆಗೆಸಿಕೊಡುವುದು ಕಾನೂನಿನಲ್ಲಿ ಅಪರಾಧ ಆಗಿದ್ದರೆ. ಈ ಪರಿಹಾರ ತೆಗೆಸಿಕೊಡುವುದರಲ್ಲಿ ಸಹಕರಿಸಿದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಬೇಕೆಂದು ಹಿ.ಜಾ.ವೇ.ಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪದಾಧಿಕಾರಿಗಳು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಪೊಲೀಸರ ದಕ್ಷತೆಯ ಕಾನೂನು ಕ್ರಮಕ್ಕೆ ಹಿಂದು ಜಾಗರಣ ವೇದಿಕೆ ಸಹಕಾರ ನೀಡಲಿದ್ದು, ದಕ್ಷತೆಯ ಹೆಸರಿನಲ್ಲಿ ಹಿಂದು ಸಮಾಜದ ನಾಯಕರನ್ನು ಧಮನಿಸಲು ಹೊರಟರೆ ನಿಮ್ಮ ದಕ್ಷತೆಯೇ ಪ್ರಶ್ನಾರ್ಹವಾಗಿರುತ್ತದೆ. ಇಂತಹ ಘಟನೆಗಳು ಮುಂದುವರಿದಲ್ಲಿ ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.