
ತುಂಬಿಹರಿಯುತ್ತಿರುವ ನೇತ್ರಾವತಿ
Sunday, June 15, 2025
ಬಂಟ್ವಾಳ: ಶನಿವಾರದಿಂದ ಎಡೆಬಿಡದೆ ಸುರಿಯುವ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಭಾನುವಾರ ಸಂಜೆಯ ವೇಳೆಗೆ 5.8 ಮೀ.ನಲ್ಲಿ ಹರಿಯುತ್ತಿತ್ತು.
ತುಂಬೆ ವೆಂಟೆಡ್ ಡ್ಯಾಂನಲ್ಲು ನಿಗದಿತ ಮಟ್ಟದಲ್ಲಿ ನೀರನ್ನು ಶೇಖರಿಸಿಟ್ಟು, ಹೆಚ್ಚುವರಿ ನೀರನ್ನು ಡ್ಯಾಂನ ಎಲ್ಲಾ ಗೇಟ್ ಗಳನ್ನು ತೆರದು ಕೆಳಭಾಗಕ್ಕೆ ಹರಿಯಬಿಡಲಾಗಿದೆ.ನೇತ್ರಾವತಿಯಲ್ಲಿ ನೀರು ತುಂಬಿಹರಿಯುವುದರಿಂದ ಸುತ್ತಮುತ್ತಲಿನ ಸಹಿತ ಕೆಲ ತಗ್ಗುಪ್ರದೇಶ, ಗದ್ದೆ, ತೋಟಗಳಲ್ಲಿ ನೀರು ನಿಲುಗಡೆಯಾಗಿದೆ. ಹಳ್ಳ, ತೋಡುಗಳಲ್ಲಿಯು ನೀರು ತುಂಬಿ ಹರಿಯುತ್ತಿದೆ.
ಜಕ್ರಿಬೆಟ್ಟು ಡ್ಯಾಂನಲ್ಲಿಯು ನಿಗದಿತಮಟ್ಟದಲ್ಲಿ ನೀರು ಸಂಗ್ರಹಿಸಿ ಹೆಚ್ಚುವರಿ ನೀರನ್ನು ಕೆಳಭಾಗಕ್ಕೆ ಹರಿಯಬಿಡಲಾಗಿದೆ. ಬಿ.ಸಿ.ರೋಡು ಸಹಿತ ನಗರಪ್ರದೇಶದಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ತೊಂದರೆ ಪಡುವಂತಾಗಿದೆ.
ಭಾನುವಾರ ಮಧ್ಯಾಹ್ನದಿಂದ ಒಂದಷ್ಟು ಹೊತ್ತು ಮಳೆಗೆ ವಿರಾಮವಿದ್ದು, ಸಂಜೆಯ ಬಳಿಕ ಮಳೆ ಅರ್ಭಟ ಶುರುವಾಯಿತು.