
ಮಳೆಗಾಲದಲ್ಲಿ ಸಮಸ್ಯೆಗಳು ತಲೆದೋರದಂತೆ ಮುಂಜಾಗರೂಕತೆ ವಹಿಸಲು ಸೂಚನೆ
ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಇಲಾಖಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿಯೆಸ್ ಜಿಎಸ್ ವೈ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಆಡಳಿತಾಧಿಕಾರಿ ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇ ಆಫೀಸ್ ಆಗಿ ತಾಲೂಕಿನ ಎಲ್ಲ ಕಚೇರಿಗಳು ಬದಲಾಗಬೇಕು, ತಾಲೂಕು ಮಟ್ಟದಲ್ಲಿ ಮುಂದಿನ ಮಳೆಗಾಲ ಸಂದರ್ಭ ಶಾಲೆ, ಅಂಗನವಾಡಿ ಸಹಿತ ಯಾವುದೇ ಸಮಸ್ಯೆಗಳು ತಲೆದೋರದಂತೆ ಮುಂಜಾಗರೂಕತೆ ವಹಿಸಲು ಹಾಗು ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲು ಇಲಾಖೆಗಳ ಮುಖ್ಯಸ್ಥರು ತಾಲೂಕು ಪಂಚಾಯಿತಿ ಜೊತೆ ಸಮನ್ವಯದಿಂದ ಕೆಲಸ ಮಾಡಿಕೊಳ್ಳಲು ಸಲಹೆ ನೀಡಿದರು.
ಬಹಳಷ್ಟು ಇಲಾಖೆಗಳು ಮಾಸಿಕ ಪ್ರಗತಿ ವರದಿಗಳನ್ನು ನೀಡದೇ ಇದ್ದ ಹಿನ್ನೆಲೆಯಲ್ಲಿ ಶೀಘ್ರ ಇನ್ನೊಂದು ಸಭೆಯನ್ನು ಕರೆಯುವುದಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ತಿಳಿಸಿದರು.
ಬಂಟ್ವಾಳ ಸಿಡಿಪಿಒ ಮಮ್ತಾಜ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಪಶುವೈದ್ಯಕೀಯ ಇಲಾಖಾಧಿಕಾರಿ ಡಾ.ಅವಿನಾಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲಿಯಾನ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿ’ಸೋಜ, ಮೆಸ್ಕಾಂ ಎಇಇ ನಾರಾಯಣ ಭಟ್, ತಾಲೂಕು ಉಪತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಸಹಿತ ನಾನಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು, ಇಲಾಖಾವಾರು ಮಾಹಿತಿ ನೀಡಿದರು.