
ಮಂಜನಾಡಿ ಉರುಮಣೆ ಕೋಡಿ ಇಬ್ಬರು ಮೊಮ್ಮಕ್ಕಳು-ಅಜ್ಜಿ ಬಲಿ ಪಡೆದ ದುರಂತ: ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧ ರಾಜ್ಯದ ಮುಖ್ಯಕಾರ್ಯದರ್ಶಿಗೆ ದೂರು ಸಲ್ಲಿಕೆ
ಉಳ್ಳಾಲ: ತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ ೩೦ರಂದು ಸಂಭವಿಸಿದ ದುರಂತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಮನೆಯಿದ್ದರೂ ಸಂಭವಿಸದ ದುರಂತ ಇದೀಗ ರಸ್ತೆ ನಿರ್ಮಾಣದ ಬೆನ್ನಲ್ಲೇ ನಡೆದಿರಲು ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂಬುದಾಗಿ ಮೃತ ಪುಟಾಣಿ ಮಕ್ಕಳ ತಂದೆ, ಮೃತ ತಾಯಿಯ ಪುತ್ರ ಸೀತಾರಾಮ ಅವರು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ.
ಸೀತಾರಾಮ ಪೂಜಾರಿ ಇವರ ತಾಯಿ ಪ್ರೇಮ ಪೂಜಾರಿ (60), ಇಬ್ಬರು ಮಕ್ಕಳಾದ ಆರ್ಯನ್ (3) ಮತ್ತು ಆರುಷ್ (1.5) ಮನೆ ಮೇಲೆ ಗುಡ್ಡ ಕುಸಿದು ಮೃತಪಟ್ಟಿದ್ದಾರೆ.
ಇವರ ಜೊತೆಗೆ, ಸೀತಾರಾಮ ಅವರ ಪತ್ನಿ ಅಶ್ವಿನಿಯವರ ಎರಡೂ ಕಾಲುಗಳು ಮತ್ತು ತಂದೆ ಕಾಂತಪ್ಪ ಪೂಜಾರಿಯವರ ಒಂದು ಕಾಲು ತುಂಡರಿಸಲ್ಪಟ್ಟಿದೆ. ಈ ದುರಂತಕ್ಕೆ ಮುಖ್ಯ ಕಾರಣವಾಗಿದ್ದು, ಕರ್ನಾಟಕ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂಪಾಯಿಗಳ ಎಸ್.ಟಿ ಕಾಲೊನಿ ಸಿಸಿ ರಸ್ತೆ ಕಾಮಗಾರಿ. ಕೆ.ಆರ್.ಡಿ.ಐ.ಎಲ್. ಮಂಗಳೂರು ಘಟಕದಿಂದ ನಿರ್ಮಾಣಗೊಂಡ ಈ ರಸ್ತೆಯ ಕಾಮಗಾರಿಯ ಸಂದರ್ಭದಲ್ಲಿ, ಗುಡ್ಡದಿಂದ ಮಣ್ಣು ತೆಗೆಯುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಡ್ಡಾಯವಾದ ಭೂವೈಜ್ಞಾನಿಕ ಪರೀಕ್ಷೆ ನಡೆಸಲಾಗಿಲ್ಲ. ಮೈನ್ಸ್ ಆಂಡ್ ಮಿನರಲ್ಸ್ ರೆಗ್ಯುಲೇಷನ್ ಆಂಡ್ ಡೆವಲಪ್ ಮೆಂಟ್ ಆಕ್ಟ್ ೧೯೫೭ ಪ್ರಕಾರ, ಮಣ್ಣಿನ ಸ್ಥಿರತೆ ಮತ್ತು ಕುಸಿತದ ಸಂಭವವನ್ನು ಮೌಲ್ಯಮಾಪನ ಮಾಡುವುದು ಕಾನೂನುಬದ್ಧವಾಗಿದೆ. ಇದರ ಜೊತೆಗೆ, ಕರ್ನಾಟಕ ಅರಣ್ಯ ಕಾಯ್ದೆ 1964ರನ್ವಯ, ಮರಗಳಿದ್ದಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಆದರೆ, ಈ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಾರಿ ಮಳೆಯಿಂದಾಗಿ ಗುಡ್ಡದ ಮಣ್ಣು ಕುಸಿದು ಸೀತಾರಾಮ ಅವರ ಮನೆಯ ಮೇಲೆ ಬಿದ್ದಿದ್ದು, ಈ ದುರಂತಕ್ಕೆ ಕಾರಣವಾಯಿತು. ಗ್ರಾಮ ಪಂಚಾಯತ್, ಜಿಲ್ಲಾ ಮಟ್ಟದ ಇಂಜಿನಿಯರಿಂಗ್ ವಿಭಾಗ ಮತ್ತು ಕಾಂಟ್ರಾಕ್ಟರ್‌ಗಳ ನಿರ್ಲಕ್ಷ್ಯವು ಈ ಘಟನೆಗೆ ಕಾರಣವಾಗಿದೆ. ಸೂಕ್ತ ಯೋಜನೆ, ತಾಂತ್ರಿಕ ಮೌಲ್ಯಮಾಪನ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಕಾರಣರಾದ ಇಂಜಿನಿಯರ್‌ಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು, ಕೆ.ಆರ್.ಡಿ.ಐ.ಎಲ್. ಅಧಿಕಾರಿಗಳು ಮತ್ತು ಕಾಂಟ್ರಾಕ್ಟರ್‌ಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 105 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಮತ್ತು ಸೆಕ್ಷನ್ 106 (ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ನಿರ್ಲಕ್ಷ್ಯ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇದಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಮತ್ತು ಇಂಜಿನಿಯರಿಂಗ್ ವಿಭಾಗದ ಉನ್ನತ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸುವಂತೆ ಅವರು ವಿನಂತಿಸಿದ್ದಾರೆ.
ದುರಂತದಿಂದ ಸೀತಾರಾಮ ಅವರ ಕುಟುಂಬಕ್ಕೆ ಜೀವಹಾನಿ, ಆಸ್ತಿಪಾಸ್ತಿ ನಷ್ಟ ಮತ್ತು ದೈಹಿಕ-ಮಾನಸಿಕ ಗಾಯಗಳುಂಟಾಗಿವೆ. ಇದಕ್ಕಾಗಿ ಸೂಕ್ತ ಪರಿಹಾರವನ್ನು ಒದಗಿಸುವಂತೆ ಅವರು ಕೋರಿದ್ದಾರೆ. ಜೊತೆಗೆ, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಾದ ಕಾನೂನು ಜಾರಿ ಮತ್ತು ಮೇಲ್ವಿಚಾರಣೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಸೀತಾರಾಮ ಪೂಜಾರಿಯವರ ಕುಟುಂಬದ ಮೇಲೆ ಸಂಭವಿಸಿದ ಈ ದುರಂತವು ಕೇವಲ ಒಂದು ಕುಟುಂಬದ ಕಥೆಯಲ್ಲ. ಇದು ಆಡಳಿತದ ವೈಫಲ್ಯ, ತಾಂತ್ರಿಕ ಲೋಪಗಳು ಮತ್ತು ನಿರ್ಲಕ್ಷ್ಯದಿಂದ ಸಾಮಾನ್ಯ ಜನರ ಜೀವನವನ್ನು ಸರ್ವನಾಶ ಮಾಡುವ ದುಷ್ಪರಿಣಾಮವನ್ನು ತೋರಿಸುತ್ತದೆ. ಈ ಘಟನೆಯಿಂದ ಪಾಠ ಕಲಿತು, ಜವಾಬ್ದಾರಿಯುತ ಆಡಳಿತ ಮತ್ತು ಸುರಕ್ಷಿತ ಕಾಮಗಾರಿಗಳನ್ನು ಖಾತ್ರಿಪಡಿಸುವುದು ಇಂದಿನ ಅಗತ್ಯವಾಗಿದೆ. ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿ, ಕಾನೂನು ಕ್ರಮ ಕೈಗೊಂಡು, ಸೀತಾರಾಮ ಅವರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.