
ಲಾಭಾಂಶದ ಆಸೆ ತೋರಿಸಿ ಕಾಪುವಿನ ವ್ಯಾಪಾರಿಗೆ ಲಕ್ಷಾಂತರ ರೂ. ವಂಚನೆ
ಕಾಪು: ಕಾಪುವಿನ ಡ್ರೈ ಫ್ರೂಟ್ಸ್ ವ್ಯಾಪಾರಿಗೆ ಲಾಭಾಂಶದ ಆಸೆ ತೋರಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾಪು ಪಡುಗ್ರಾಮದಲ್ಲಿ ವ್ಯಾಪಾರ ನಡೆಸುತ್ತಿರುವ ಮೋಹನ್ ಕೋಟ್ಯಾನ್ ವಂಚನೆಗೊಳಗಾದ ವ್ಯಕ್ತಿ.
ಕಳೆದ ಮೇ 8ರಂದು ಮೋಹನ್ ಕೋಟ್ಯಾನ್ ಅವರ ಟೆಲಿಗ್ರಾಂ ಖಾತೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಆ.ಛಿಟಜಿಟಿ sಜಚಡಿಛಿ ಞಚಡಿಞಛಿಠಿ ಎಂಬ ಲಿಂಕ್ ಬಂದಿದ್ದು ಆ ಲಿಂಕ್ ಪ್ರಕಾರ 600 ರೂಪಾಯಿಗೆ 660 ರೂಪಾಯಿ ಹಣ ಲಾಭಾಂಶದೊಂದಿಗೆ ಖಾತೆಗೆ ಜಮಾ ಆಗಿದೆ. ಅನಂತರ ಅದೇ ರೀತಿ ಟಾಸ್ಕ್ ಕೊಟ್ಟು ಶೇ.60 ಲಾಭಾಂಶ ಬರುತ್ತದೆ ಎಂದು ಹಂತ-ಹಂತವಾಗಿ ಸುಮಾರು 8 ಬಾರಿ ಸುಮಾರು 7,26,000 ರೂ. ಹಣವನ್ನು ಡೆಪಾಸಿಟ್ ಮಾಡಿಸಿಕೊಂಡಿದ್ದರು.
ಹಿಂದೆ ಕಟ್ಟಿದ ಹಣದ ಲಾಭಾಂಶ ಬರಲು ಪುನಃ ಟ್ಯಾಕ್ಸ್ ಮೊತ್ತ 2 ಲಕ್ಷ ರೂ. ಕಟ್ಟಿದರೆ ಡೆಪಾಸಿಟ್ ಮೊತ್ತದೊಂದಿಗೆ 3 ಲಕ್ಷ ರೂ. ನಿಮ್ಮ ಅಕೌಂಟ್‌ಗೆ ಬರುತ್ತದೆ ಎಂದು ನಂಬಿಸಿದ್ದರು. ಈ ಸಂದರ್ಭ ಮೋಹನ್ ಅವರಿಗೆ ಅನುಮಾನ ಬಂದಿದ್ದು ಇದೊಂದು ಮೋಸದ ಜಾಲ ಇರಬಹುದೆಂದು ತಿಳಿದು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ, ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳುವುದರಿಂದ ಬಚಾವಾಗಿದ್ದಾರೆ.
ಮೋಸದ ಜಾಲದಲ್ಲಿ ಇಬ್ಬರು ಆರೋಪಿಗಳು ಶಾಮೀಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.