
ವಾಣಿಜ್ಯ ಕ್ಷೇತ್ರದಲ್ಲಿ ಎಐ ಪಾತ್ರ ಗಣನೀಯ: ಪ್ರೊ. ಪ್ರಕಾಶ್ ಪಿಂಟೋ
ಕೊಣಾಜೆ: ಪ್ರಸಕ್ತ ಆಧುನಿಕ ಕಾಲದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ಪಾತ್ರ ಗಣನೀಯವಾಗಿದೆ ಎಂದು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಡೀನ್ ಪ್ರೊ. ಪ್ರಕಾಶ್ ಪಿಂಟೋ ಅಭಿಪ್ರಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ’ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ - ಚಾಲಿತ ಜಾಗತಿಕ ವಿದ್ಯಮಾನಗಳು’ ಎಂಬ ವಿಷಯದ ಕುರಿತು ಬ್ಯಾಂಕ್ ಆಫ್ ಬರೋಡಾ ಚೇರ್, ಕೆನರಾ ಬ್ಯಾಂಕ್ ಚೇರ್ ಮತ್ತು ಯೂನಿಯನ್ ಬ್ಯಾಂಕ್ ಚೇರ್ ಸಂಯೋಜನೆಯೊಂದಿಗೆ ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದಕ್ಷತೆ ಹೆಚ್ಚಳ, ಕಡಿಮೆ ವೆಚ್ಚ ಮತ್ತು ನಿಖರವಾದ ಅಂಕಿ ಸಂಖ್ಯೆಗಳ ಕ್ರೋಡೀಕರಣ ಇತ್ಯಾದಿ ಕ್ಷಿಪ್ರವಾದ ಬೆಳವಣಿಗೆಯು ಕೃತಕ ಬುದ್ಧಿಮತ್ತೆಯಿಂದ ಹೆಚ್ಚುತ್ತಿದೆ. ಇದು ಗ್ರಾಹಕರು ಮಾರುಕಟ್ಟೆಯಲ್ಲಿ ವಸ್ತು ಮತ್ತು ಬಳಕೆ ಸೇವೆಗಳ ಬಳಕೆಗೆ ಸಮಯವನ್ನು ಕಡಿಮೆಗೊಳಿಸುತ್ತಿದೆ. ಜಾಗತಿಕವಾಗಿ ಅಪಾರವಾದ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದೇವೆ. ಇದರಿಂದ ವಾಣಿಜ್ಯ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರೊ. ಪುಟ್ಟಣ್ಣ ಕೆ. ಹಾಗೂ ಝಿಂಬಾಬ್ವೆ ದೇಶದ ವಿನ್ನಿ ಸಿಂಬೋಗಿಲೆ ಬಾಝಿಲಾ ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು.
ವೇದಿಕೆಯಲ್ಲಿ ಪ್ರೊ.ವೈ.ಮುನಿರಾಜು, ಪ್ರೊ. ಈಶ್ವರ ಪಿ., ಪ್ರೊ.ವೇದವ ಪಿ., ಪ್ರೊ.ಪರಮೇಶ್ವರ, ವಾಣಿಜ್ಯ ಸಂಘದ ಸ್ಟಾಫ್ ಕೋ ಆರ್ಡಿನೇಟರ್ ಗುರುರಾಜ್ ಪಿ., ವೈಶಾಲಿ ಕೆ., ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ್ ಎಸ್., ನಿರ್ಮಲಾ ಬಿ., ಕಾವ್ಯಾ ಎಚ್.ಎಸ್., ಸುದೀಪ್ ಎಚ್.ಆರ್., ಮುಹಮ್ಮದ್ ಫಾರಿಸ್, ಸಾರ್ಥಕ್ ಟಿ. ಮತ್ತು ಅಚ್ಚಯ್ಯ ಡಿ.ಪಿ. ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಗಳಿಗೆ ಬೆಸ್ಟ್ ಪೇಪರ್ ಅವಾರ್ಡ್ ವಿತರಿಸಲಾಯಿತು. ನಂತರ ಮ್ಯಾಗ್ನಂ ಫೆಸ್ಟ್ ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಮತ್ತು ದ್ವಿತೀಯ ವೈಯಕ್ತಿಕ ಪ್ರಶಸ್ತಿ ನೀಡಲಾಯಿತು . ಹಾಗೂ ಸಮಗ್ರ ಪ್ರಶಸ್ತಿಯನ್ನು ಪ್ರಥಮ ವಿಭಾಗದಲ್ಲಿ ದೇರಳಕಟ್ಟೆ ಬೀರಿಯ ಸೈಂಟ್ ಅಲೋಶಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ, ಮತ್ತು ದ್ವಿತೀಯ ವಿಭಾಗದಲ್ಲಿ ಮಂಗಳೂರಿನ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಅನಂತ್ ಆರಿಫಾ ಸ್ವಾಗತಿಸಿದರು. ಗುರುರಾಜ್ ಪಿ. ವಂದಿಸಿದರು. ರಕ್ಷಿತಾ ಎಂ. ಆರ್. ಕಾರ್ಯಕ್ರಮ ನಿರೂಪಿಸಿದರು.