
ಜು.2 ರಿಂದ ಕಾಂಗ್ರೆಸ್ ಪ್ರತಿಭಟನೆ
ಕುಂದಾಪುರ: 2 ವರ್ಷದ ಹಿಂದೆ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜಾರಿಗೆ ತಂದಿರುವ 9/11 ಏಕ ನಿವೇಶನ, ಅಕ್ರಮ-ಸಕ್ರಮ ಯೋಜನೆಯಲ್ಲಿ 53 ಮತ್ತು 57ರಲ್ಲಿ ಅರ್ಜಿ ತಿರಸ್ಕರಿಸಲು ಮತ್ತು ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳ ಮರು ಸಮೀಕ್ಷೆ ಕುರಿತು ಹಾಗೂ ವಿದ್ಯುತ್ ದರ ಏರಿಕೆಯಂತಹ ಸುತ್ತೋಲೆ ಮತ್ತು ಆದೇಶ ಹೊರಡಿಸಿರುತ್ತದೆ.
ಆದರೂ, ಈಗ ಕರ್ನಾಟಕದ ಕಾಂಗ್ರೆಸ್ ಸರಕಾರ ಇದನ್ನೆಲ್ಲಾ ಮಾಡಿರುತ್ತದೆ ಎಂದು ಸುಳ್ಳು ಮತ್ತು ಅಪಪ್ರಚಾರ ಮಾಡಿ ಮುಂದೆ ಬರುವ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮತದಾರರ ಅನುಕಂಪ ಪಡೆಯಲು ಜೂ.23 ರಂದು ಬಿಜೆಪಿ ಪ್ರತಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನೆಡೆಸಿತ್ತು.
ಈ ವಿಚಾರಗಳ ಕುರಿತು ವಾಸ್ತವ ವಿಚಾರ ಮತ್ತು ಸತ್ಯವನ್ನು ಜನರ ಮುಂದಿಡಲು ಜು.2 ರಿಂದ 1 ವಾರಗಳ ಕಾಲ ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ‘ಕಾಂಗ್ರೆಸ್ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ’ ಎಂಬ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಲು ಕಾಂಗ್ರೆಸ್ ಯೋಜಿಸಿದೆ. ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಪ್ರತಿ ದಿನ 3 ಗ್ರಾಮ ಪಂಚಾಯತ್ ಎದುರು ಬೆಳಗ್ಗೆ 10 ಗಂಟೆಗೆ ಈ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುವುದೆಂದು ತಿರ್ಮಾನಿಸಲಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.