ರೈಲ್ವೆ ಪ್ಲಾಟ್‌ಫಾರ್ಮ್ ನವೀಕರಣ: ಲಯನ್ಸ್ ಕೊಡುಗೆ

ರೈಲ್ವೆ ಪ್ಲಾಟ್‌ಫಾರ್ಮ್ ನವೀಕರಣ: ಲಯನ್ಸ್ ಕೊಡುಗೆ


ಕುಂದಾಪುರ: ಸಂಸದನಾದ ಬಳಿಕ ಈವರೆಗೆ ರೈಲ್ವೆ ವಲಯಕ್ಕೆ 60ಲಕ್ಷ ರೂ.ವೆಚ್ಚದಲ್ಲಿ ಸಾರ್ವಜನಿಕ ಅನುಕೂಲಕ್ಕೆ ಕೊಡುಗೆ ಕೊಟ್ಟ ದೇಶದಲ್ಲಿ ಮಗದೊಂದು ಸಂಘಟನೆ ನಾನು ಕಂಡಿಲ್ಲ. ಬಹುಶಃ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನ. ಹಂಗಳೂರು ಲಯನ್ಸ್ ಕ್ಲಬ್‌ನ ಈ ಕೊಡುಗೆ ಶಾಶ್ವತ ದಾಖಲೀಕರಣ ಆಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಶನಿವಾರ ಇಲ್ಲಿಗೆ ಸಮೀಪದ ಮೂಡ್ಲಕಟ್ಟೆಯ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಹಾಗೂ ಲಯನ್ಸ್ ಕ್ಲಬ್ ಹಂಗಳೂರು 60ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಪ್ಲಾಟ್‌ಫಾರ್ಮ್ ನವೀಕರಣ, ನೂತನ ಮೇಲ್ಚಾವಣಿ ಹಾಗೂ ಗಾರ್ಡನ್ ಸುಂದರೀಕರಣ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ವಲಯ ಬೆಳವಣಿಗೆಯಲ್ಲಿಸಂಘಟನೆಯ ಪಾತ್ರವು ಇರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇಂತಹದೊಂದು ಅನುಪಮ ಕೊಡುಗೆ ಸಾಕಾರಗೊಳ್ಳುವಲ್ಲಿ ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಪಾತ್ರ ಹಿರಿದಾದುದು. ಕೊಡುಗೆ ಕೊಟ್ಟ ಎಲ್ಲರಿಗೂ ಕೇಂದ್ರ ಸರಕಾರ ಹಾಗೂ ಭಾರತೀಯ ರೈಲ್ವೆ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದರು.

ಹೆಚ್ಚುವರಿ ವಂದೇಭಾರತ್ ರೈಲಿಗೆ ಬೇಡಿಕೆ..

ಪ್ರತಿದಿನ ಉಡುಪಿ, ದಕ್ಷಿಣ ಕನ್ನಡದಿಂದ 30ಕ್ಕೂ ಅಧಿಕ ಬಸ್‌ಗಳು ಮುಂಬಯಿಗೆ ಹೋಗುತ್ತಿವೆ. ಇಷ್ಟೊಂದು ಮಂದಿ ಮುಂಬಯಿ ಪ್ರಯಾಣಿಕರನ್ನು ಮನಗಂಡು ಅವರಿಗೆ ರೈಲ್ವೆಯ ಅನುಕೂಲ ಒದಗಿಸುವ ಭಾಗವಾಗಿ ಮಂಗಳೂರು-ಮುಂಬಯಿ ನಡುವೆ ಹೆಚ್ಚುವರಿ ವಂದೇ ಭಾರತ್ ರೈಲಿನ ಬೇಡಿಕೆ ಇರಿಸಿದ್ದೇವೆ. ರೈಲ್ವೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಲ್ಲಿನ ಸಮಿತಿಯವರ ಬೇಡಿಕೆಯಂತೆ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆ ನೀಡಲಾಗಿದೆ. ಪ್ರಸ್ತುತ ದಿನದಲ್ಲಿಅದ್ಭುತವಾದ ಸ್ಪಂದನ ಸಿಗುತ್ತಿದೆ. ಒಂದೆ ದಿನ 150ಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿಇಳಿಯುತ್ತಿರುವ ವಿಚಾರ ತಿಳಿದುಬಂದಿದೆ. ಅಲ್ಲದೆ ಪಂಚಗಂಗಾ ರೈಲಿಗೆ ೫ ಬೋಗಿಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದರು. 

ಭಾರತೀಯ ರೈಲ್ವೆಯೊಂದಿಗೆ ವಿಲೀನ..

ಕೊಂಕಣ ರೈಲ್ವೆಯಲ್ಲಿನ ಸಮಗ್ರ ಅಭಿವೃದ್ಧಿಗೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗುವುದು ಅಗತ್ಯ. ಈಗಾಗಲೆ ಕೇರಳ, ಗೋವಾ ಸಹಮತ ಸೂಚಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕವು ಒಪ್ಪಿಗೆ ನೀಡಿದ್ದು ಕೆಲವೊಂದು ತಾಂತ್ರಿಕ ತೊಂದರೆ ಪರಿಹರಿಸಲು ಬಾಕಿಯಿದೆ. ಕರ್ನಾಟಕದ ಸಚಿವ ಎಂ.ಬಿ.ಪಾಟೀಲ್ ವಿಲೀನ ಪ್ರಕ್ರಿಯೆಗೆ ಬೇಕಾದಂತಹ ಕಾರ್ಯ ನಡೆಸಿಕೊಡುವ ಭರವಸೆ ಕೂಡ ನೀಡಿದ್ದಾರೆ ಎಂದು ಹೇಳಿದರು. 

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭಹಾರೈಸಿದರು. ಹಂಗಳೂರು ಲಯನ್ಸ್ ಜಿಲ್ಲಾಗವರ್ನರ್ ಮಹಮ್ಮದ್ ಹನೀಫ್, ಲಯನ್ಸ್ ಜಿಲ್ಲಾ ಪ್ರಥಮ ಉಪಗವರ್ನರ್ ಸ್ವಪ್ನ ಸುರೇಶ್, ದ್ವಿತೀಯ ಉಪಗವರ್ನರ್ ರಾಜೀವ ಕೋಟ್ಯಾನ್, ನಿಯೋಜಿತ ಲಯನ್ಸ್ ಉಪಗವರ್ನರ್ ಹರಿಪ್ರಸಾದ್ ರೈ, ಲಯನ್ಸ್ ಜಿಲ್ಲಾ ಅಂಬಾಸಿಡರ್ ಅರುಣ್ಕುಮಾರ ಹೆಗ್ಡೆ, ರೀಜನ್ ಚೇರೆಮೆನ್ ಸೋಮನಾಥ ಹೆಗ್ಡೆ, ಹಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಮ್ಯಾಥ್ಯೂ ಜೋಸೆಫ್, ಕೋಶಾಧಿಕಾರಿ ಪುನೀತ್ ಶೆಟ್ಟಿ, ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಪಮ ಶೆಟ್ಟಿ,ಗ್ರೆಟ್ಟಾ ಡಿಕೋಸ್ಟ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article