
ಮುಂದಿನ ಪೀಳಿಗೆಗೆ ಕೃಷಿ ಬದುಕಿನ ಅರಿವು ಮೂಡಿಸುವುದು ಹಿರಿಯರ ಕರ್ತವ್ಯ: ಶಾಸಕ ಡಿ. ವೇದವ್ಯಾಸ ಕಾಮತ್
ಮಂಗಳೂರು: ಐಷಾರಾಮದ ಬದುಕನ್ನು ಮಾತ್ರ ಕಂಡಿರುವ ನಗರವಾಸಿ ಇಂದಿನ ಪೀಳಿಗೆಯ ಮಕ್ಕಳಿಗೆ ಹಳ್ಳಿಯ ಕೃಷಿ ಬದುಕಿನ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ರೈತರ ಪರಿಶ್ರಮ, ಕಷ್ಟಗಳ ತಿಳುವಳಿಕೆಯನ್ನು ತಿಳಿಸುವುದು ಕೂಡ ಅಷ್ಟೇ ಮುಖ್ಯ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ಕಲ್ಕೂರ ಪ್ರತಿಷ್ಠಾನವು ಸಾವಯವ ಕೃಷಿ ಗ್ರಾಹಕ ಬಳಗದ ಸಹಯೋಗದೊಂದಿಗೆ ಏರ್ಪಡಿಸಿದ್ದ "ಹಲಸು ಮಾವು ಮೇಳ" ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮೇಳವನ್ನು ಹಿರಿಯ ಸಾಮಾಜಿಕ ಕಾರ್ಯಕರ್ತೆ ಆರೂರು ಲಕ್ಷ್ಮೀ ರಾವ್ ಉದ್ಘಾಟಿಸಿ ಹಳೆಯ ಕಾಲದ ಸಾವಯವ ಕೃಷಿ ಬೆಳೆಗಳು ಹಾಗೂ ಅವುಗಳ ಉತ್ಪನ್ನಗಳನ್ನು ಪುನರಪಿ ನಗರದ ಜನತೆಗೆ ಪರಿಚಯಿಸುವ ಕೆಲಸವನ್ನು ಈ ಮೂಲಕ ಮಾಡುತ್ತಿರುವ ಕಲ್ಕೂರ ಪ್ರತಿಷ್ಠಾನದ ಸಾಧನೆ ಸ್ತುತ್ಯರ್ಹವಾದುದು ಎಂದರು.
ವಿಶೇಷ ಉಪನ್ಯಾಸವಿತ್ತ ಪರಿಸರ ತಜ್ಞ ಡಾ. ಮನೋಹರ ಉಪಾಧ್ಯಾಯ ಮಾತನಾಡಿ, ಹಿಂದಿನ ತಲೆಮಾರಿನ ಆರೋಗ್ಯಪೂರ್ಣ ದೇಸಿ ತಳಿಗಳ ಸಂರಕ್ಷಣೆ ಹಾಗೂ ಪೋಷಣೆಯ ಸಲುವಾಗಿ ಸಹಕಾರಿ ತತ್ವದ ಆಧಾರದಲ್ಲಿ ಸ್ಥಳವನ್ನು ಖರೀದಿಸಿ ಹಣ್ಣು ಹಂಪಲುಗಳ ಬೆಳೆ ಬೆಳೆಸುವಂತಾಗಬೇಕೆಂದರು.
ಕಾರ್ಯಕ್ರಮದ ಆಯೋಜಕ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆ ಗೈದು ಉಳ್ಳವರು ಶಿವಾಲಯ ಮಾಡುವರು ಎನ್ನುವ ತೆರದಿ ಶಿವಾಲಯದಂತೆ ವೃಕ್ಷಗಳ ಸಂರಕ್ಷಣೆ, ದೇಸಿ ತಳಿಗಳ ರಕ್ಷಣೆ ಮಾಡುವುದರಿಂದ ಆರೋಗ್ಯಪೂರ್ಣ ಬದುಕು ಮಾನವ ಕುಲಕ್ಕೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಲಿದೆ ಎಂದರು.
ಮಂಗಳೂರು ರಾಮಕೃಷ್ಣ ಮಠದ ಸ್ವಾಮೀಜಿ ಜಿತಕಾಮಾನಂದ ಮಹಾರಾಜ್, ಶರವು ರಾಘವೇಂದ್ರ ಶಾಸ್ತ್ರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಹರಿಕೃಷ್ಣ ಪುನರೂರು, ಡಾ. ಎಂ.ಬಿ. ಪುರಾಣಿಕ್, ಸಾವಯವ ಕೃಷಿ ಗ್ರಾಹಕ ಬಳಗದ ರತ್ನಾಕರ, ಮಾಜಿ ಕಾರ್ಪೊರೇಟರ್ ಶಕಿಲಾ ಕಾವ, ವಿಜಯಲಕ್ಷ್ಮೀ ಬಿ. ಶೆಟ್ಟಿ, ವಿನೋದ ಕಲ್ಕೂರ, ಪೂರ್ಣಿಮಾ ಪ್ರಭಾಕರ ರಾವ್, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಉಪಸ್ಥಿತರಿದ್ದರು.