
ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಜೂ.23 ರಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ನೇತೃತ್ವದಲ್ಲಿ ಪ್ರತಿಭಟನೆ
ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಇದೇ ಜೂನ್ 23 ಸೋಮವಾರದಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತಿಳಿಸಿದರು.
94 ಸಿ ಹಕ್ಕು ಪತ್ರಗಳಿಗೆ 9/11 ನೀಡದಿರುವುದು, ಇ-ಖಾತಾ ಹೆಸರಿನಲ್ಲಿ ಜನಸಾಮಾನ್ಯರಿಗೆ ಸಂಕಷ್ಟ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡದಿರುವುದು, ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದಲ್ಲದೇ ನೂತನ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನೇ ಸ್ವೀಕರಿಸದಿರುವುದು, ಮಂಗಳೂರು ಮಹಾನಗರ ಪಾಲಿಕೆಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರ್ಕಾರ ವಿಶೇಷ ಅನುದಾನವನ್ನೇ (SFC) ನೀಡದೇ ಪಾಲಿಕೆಯ ಅಭಿವೃದ್ಧಿ ಕುಂಠಿತಗೊಳಿಸಿರುವುದು, ಕೃಷಿ ಭೂಮಿಯನ್ನು ಬೇರೆಯವರ ಸಹಿತ ಕುಟುಂಬದೊಳಗೂ ಯಾರಿಗೂ ನೀಡಲಾಗದಂತಹ ಪರಿಸ್ಥಿತಿ ತಂದೊಡ್ಡಿರುವುದು, ಅವೈಜ್ಞಾನಿಕವಾಗಿ ಭೂಮಿಯ ಮಾರ್ಗಸೂಚಿ ದರ ಏರಿಸಿ ಪಾಲಿಕೆ ವ್ಯಾಪ್ತಿಯ ಜನರಿಗೆ ಆಸ್ತಿ ತೆರಿಗೆ ಏರಿಕೆ ಹೊರೆ ಹಾಕಿದ್ದು, 5 ರೂ.ಗೆ ಸಿಗುತ್ತಿದ್ದ ಜನನ ಮರಣ ಪತ್ರವನ್ನು 50 ರೂ.ಗೆ ಏರಿಸಿದ್ದೂ ಅಲ್ಲದೇ ಎಲ್ಲಾ ಸ್ಟ್ಯಾಂಪ್ ಡ್ಯೂಟಿಗಳ ಬೆಲೆಯನ್ನು ವಿಪರೀತವಾಗಿ ಏರಿಸಿದ್ದು, ಡೆಡ್ ಎಂಡ್ ನಿವೇಶನಗಳಿಗೆ ಏಕನಿವೇಶನ ವಿನ್ಯಾಸ ನೀಡದೇ ಅನ್ಯಾಯ, ವಿದ್ಯಾರ್ಥಿ ವೇತನ ತಡೆ ಹಿಡಿದಿದ್ದು, ಮೂಡ ಪ್ರಾಧಿಕಾರದ ಅಧಿಕಾರವನ್ನೇ ಮೊಟಕುಗೊಳಿಸಿದ್ದು, ಮಳೆಹಾನಿ ಪರಿಹಾರದಲ್ಲಿ ಗಣನೀಯ ಕಡಿತಗೊಳಿಸಿದ್ದು, ವೇತನ ರಹಿತವಾಗಿ ಆಶಾ ಕಾರ್ಯಕರ್ತೆಯರನ್ನು ದುಡಿಸಿಕೊಳ್ಳುತ್ತಿರುವುದು, ಪ್ರಾಪರ್ಟಿ ಕಾರ್ಡ್ ಸ್ಥಗಿತಗೊಂಡಿರುವುದು, ಕುಡಿಯುವ ನೀರಿನ ದರ ಹೆಚ್ಚಳ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರತಿಭಟನೆ ನಡೆಯಲಿದೆ ಎಂದರು.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ ಕಚೇರಿಗಳ ಮುಂದೆ ಏಕಕಾಲದಲ್ಲಿ ನಡೆಯಲಿರುವ ಈ ಜನಪರ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಜನಸಾಮಾನ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕರು ಮನವಿ ಮಾಡಿದರು.