
ಅಂತಾರಾಷ್ಟ್ರೀಯ ಯೋಗ ದಿನದಂದು ಮಂಗಳೂರಿನಲ್ಲಿ ‘ಜಲಯೋಗ’: ಈಜುತ್ತಲೇ ಮೋದಿಗೆ ಪತ್ರ
ಮಂಗಳೂರು: ಇಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ, ಕರಾವಳಿಯ ಮಂಗಳೂರಿನಲ್ಲಿ ವಿಶಿಷ್ಟ ಜಲಯೋಗ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.
ಮಂಗಳೂರು ಮಹಾನಗರ ಈಜುಕೊಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 40 ಮಂದಿ ಹವ್ಯಾಸಿ ಈಜುಗಾರರ ಬಳಗದ ಸದಸ್ಯರು ಭಾಗವಹಿಸಿ, ನೀರಿನಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದರು. ಈ ವಿಶೇಷ ಸಂದರ್ಭದಲ್ಲಿ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದು ಎಲ್ಲರ ಗಮನ ಸೆಳೆದರು.
ಜಲಯೋಗವು ಯೋಗಾಸನ, ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ನೀರಿನೊಂದಿಗೆ ಸಂಯೋಜಿಸುವ ಒಂದು ವಿಶೇಷ ಅಭ್ಯಾಸವಾಗಿದೆ. ಈಜುಕೊಳದ 16 ಅಡಿ ಆಳದ ನೀರಿನಲ್ಲಿ ಈಜುಗಾರರು ಪದ್ಮಾಸನ, ಶವಾಸನ ಮುಂತಾದ ಯೋಗಾಸನಗಳ ಕಸರತ್ತು ಪ್ರದರ್ಶಿಸಿದರು. ನೀರಿನಲ್ಲಿ ತೇಲುವುದರಿಂದ ದೇಹದ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗಿ, ಈ ಆಸನಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಯಿತು. ಜೊತೆಗೆ, ಸ್ನಾಯುಗಳ ಬಲವರ್ಧನೆಯೂ ಆಗುತ್ತದೆ ಎಂಬುದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಅನುಭವ ಹಂಚಿಕೊಂಡರು.
‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ಈ ವರ್ಷದ ಯೋಗ ದಿನಾಚರಣೆಯ ಧ್ಯೇಯ ವಾಕ್ಯದಡಿ ಈ ಕಾರ್ಯಕ್ರಮ ನಡೆಯಿತು. ಮಂಗಳೂರು ಮಹಾನಗರ ಈಜುಕೊಳದ ಸಹಯೋಗದೊಂದಿಗೆ ಹವ್ಯಾಸಿ ಈಜುಗಾರರ ಬಳಗವು ಆಯೋಜಿಸಿತ್ತು. ಜಲಯೋಗವು ದೈಹಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಮಾನಸಿಕ ಶಾಂತಿಯನ್ನೂ ಒದಗಿಸುತ್ತದೆ ಎಂಬುದನ್ನು ಈ ಕಾರ್ಯಕ್ರಮವು ತೋರಿಸಿಕೊಟ್ಟಿತು. ಭಾಗವಹಿಸಿದ ಎಲ್ಲರೂ ಸ್ಮರಣೀಯ ಅನುಭವ ಪಡೆದರು.
‘ಜಲಯೋಗ’ ಈಜುತ್ತಲೇ ಪತ್ರ ಬರೆದ ಶಿವಪ್ರಕಾಶ್: ಕಾರ್ಯಕ್ರಮದ ವಿಶೇಷ ಆಕರ್ಷಣೆಯೆಂದರೆ, ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರ ವಿಭಿನ್ನ ಪ್ರಯತ್ನ. ಯೋಗ ದಿನಾಚರಣೆಯ ಮಹತ್ವವನ್ನು ಎತ್ತಿಹಿಡಿಯುವ ಸಲುವಾಗಿ, ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದರು. ’ಡಿಯರ್ ಮೋದಿಜಿ, ಹ್ಯಾಪಿ ಇಂಟರ್ನ್ಯಾಷನಲ್ ಯೋಗ ಡೇ. ಐ ಯಾಮ್ ರೈಟಿಂಗ್ ದಿಸ್ ಪೋಸ್ಟ್ ಕಾರ್ಡ್ ವೈಲ್ ಸ್ವಿಮ್ಮಿಂಗ್ ಇನ್‌ದ ಪೂಲ್. ಫಿಟ್ ಇಂಡಿಯಾ-ಶಿವಪ್ರಕಾಶ್, ಮಂಗಳೂರು’ ಎಂದು ಈಜುತ್ತಲೇ ಪತ್ರ ಬರೆದದ್ದು ವಿಶೇಷವಾಗಿತ್ತು.
ಈ ಬಗ್ಗೆ ಮಾತನಾಡಿದ ನಿವೃತ್ತ ಡೀನ್ ಶಿವಪ್ರಕಾಶ್, ‘ನಮ್ಮ ದೇಶದ ಪ್ರಧಾನಮಂತ್ರಿ ಮೋದಿ ಅವರು ಯೋಗದ ಬಗ್ಗೆ ಇಡೀ ವಿಶ್ವಕ್ಕೆ ಅರಿವು ಮೂಡಿಸಿದ್ದಾರೆ. ಮನಸು, ಆತ್ಮ, ದೇಹದ ಸಂಯೋಗವೇ ಯೋಗ. ನಾನು ಇಲ್ಲಿ ಪ್ರತಿದಿನ ಈಜಲು ಬರುತ್ತೇನೆ. ಇಂದು ಯೋಗ ದಿನದ ಪ್ರಯುಕ್ತ ಈಜುತ್ತಲೇ ಪ್ರಧಾನಮಂತ್ರಿಗೆ ಪತ್ರ ಬರೆಯುವ ಪ್ರಯತ್ನ ಮಾಡಿದ್ದೇನೆ’ ಎಂದರು.
ಹವ್ಯಾಸಿ ಈಜುಗಾರರ ಸಂಘದ ಸದಸ್ಯ ಚಂದ್ರಹಾಸ ಶೆಟ್ಟಿ ಪ್ರತಿಕ್ರಿಯಿಸಿ, ‘ನಾವು ಪ್ರಥಮ ಬಾರಿಗೆ ಜಲಯೋಗ ಕಾರ್ಯಕ್ರಮ ಮಾಡಿದ್ದೇವೆ. ಇದರಲ್ಲಿ ೪೦ ಸದಸ್ಯರು ಜಲಯೋಗ ಮಾಡಿದ್ದಾರೆ. ಇದರಲ್ಲಿ ವಿವಿಧ ಭಂಗಿಗಳಲ್ಲಿ ಸದಸ್ಯರು ಜಲಯೋಗ ಪ್ರದರ್ಶಿಸಿದರು’ ಎಂದು ಹೇಳಿದರು.
ಈ ಜಲಯೋಗ ಕಾರ್ಯಕ್ರಮವು ವಿಶ್ವ ಯೋಗ ದಿನಾಚರಣೆಯಂದು ಹೊಸ ಆಯಾಮಕ್ಕೆ ನಾಂದಿಯಾಯಿತು. ಈಜುಗಾರರ ಉತ್ಸಾಹ, ಶಿವಪ್ರಕಾಶ್ ಅವರ ಸೃಜನಶೀಲ ಪತ್ರ ಬರವಣಿಗೆ ಮತ್ತು ಜಲಯೋಗದ ವಿಶಿಷ್ಟತೆಯೊಂದಿಗೆ ಯಶಸ್ವಿಯಾಯಿತು. ಯೋಗದ ಮಹತ್ವವನ್ನು ಜನರಿಗೆ ತಿಳಿಸುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಿತು. ಯೋಗವು ಭಾರತದ ಅಮೂಲ್ಯ ಕೊಡುಗೆಯಾಗಿದ್ದು, ಇಂತಹ ಸೃಜನಾತ್ಮಕ ಆಚರಣೆಗಳಿಂದ ಅದರ ಜಾಗತಿಕ ಮನ್ನಣೆ ಇನ್ನಷ್ಟು ಎತ್ತರಕ್ಕೇರಲಿದೆ.