
ಹುತಾತ್ಮ ಸಂಗಾತಿ ಶ್ರೀನಿವಾಸ್ ಬಜಾಲ್ ನೆನಪಿನಲ್ಲಿ 23ನೇ ವರುಷದ ರಕ್ತದಾನ ಶಿಬಿರ
Monday, June 30, 2025
ಮಂಗಳೂರು: ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಘಟಕವು ಕೋಮುವಾದಿಗಳ ಕರಾಳ ಖಡ್ಗಕ್ಕೆ ಬಲಿಯಾದ ಶ್ರೀನಿವಾಸ್ ಬಜಾಲ್ ಅವರ 23ನೇ ವರುಷದ ಹುತಾತ್ಮ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಜೂ.29 ರಂದು ಪಕ್ಕಲಡ್ಕ ಭಗತ್ ಸಿಂಗ್ ಭವನದಲ್ಲಿ ಇಂಡಿಯನ್ ರೆಡ್‌ಕ್ರಾಸ್ ರಕ್ತನಿಧಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದು, ರಕ್ತದಾನ ಶಿಬಿರವನ್ನು ನಿವೃತ್ತ ಪ್ರಭಾರ ಜಿಲ್ಲಾಧಿಕಾರಿ, ರೆಡ್‌ಕ್ರಾಸ್ ಸಂಸ್ಥೆಯ ಹಿರಿಯ ಸಲಹೆಗಾರ ಪ್ರಭಾಕರ್ ಶರ್ಮಾ ಉದ್ಘಾಟಿಸಿದರು.
ರಕ್ತದ ಮಹತ್ವವನ್ನು ಇಂದಿನ ಯುವ ತಲೆಮಾರುಗಳಿಗೆ ತಿಳಿಸಿಕೊಡಬೇಕಾಗಿದೆ. ತಮ್ಮ ದೇಹದಲ್ಲಿ ಹರಿಯುವ ರಕ್ತವನ್ನು ದಾನಮಾಡುವ ಮೂಲಕ ಇನ್ನೊಂದು ಜೀವ ಉಳಿಸುವ ಉದ್ದೇಶಕಷ್ಟೇ ಬಳಸಬೇಕು ಹೊರತು ಜೀವ ಕಸಿಯುವ ಹಕ್ಕು ಯಾರಿಗೂ ಇಲ್ಲ. ಈ ವೇಳೆ ಮದರ್ ತೆರೆಜಾ ಹೇಳಿದ ಮಾತು ನೆನಪಿಗೆ ಬರುತ್ತಿದೆ, ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳೇ ಶ್ರೇಷ್ಠ ಇಂತಹ ಅದ್ಭುತ ಹೇಳಿಕೆಯನ್ನು ನಾವುಗಳೆಲ್ಲಾ ಸರಿಯಾಗಿ ಅರ್ಥೈಸಿದರೆ ಈ ಸಮಾಜದ ಒಳಿತಿಗೆ ಸಹಕಾರಿಯಾಗಲಿದೆ ಎಂದರು.
ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ಜಗದೀಶ್ ಬಜಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ರೆಡ್‌ಕ್ರಾಸ್ ಸಂಸ್ಥೆಯ ಸಲಹೆಗಾರ ರವಿ, ರೆಡ್‌ಕ್ರಾಸ್ ರಕ್ತ ನಿಧಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ್, ಡಿವೈಎಫ್‌ಐ ಜಿಲ್ಲಾ ಮುಖಂಡ ಶ್ರೀನಾಥ್ ಕಾಟಿಪಳ್ಳ, ವೈದ್ಯ ಡಾ. ಶೀತಲ್ ಉಪಸ್ಥಿತರಿದ್ದರು.
ಶಿಬಿರದ ನೇತೃತ್ವವನ್ನು ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಧಿರಾಜ್ ಬಜಾಲ್, ಮುಖಂಡರುಗಳಾದ ಅಶೋಕ್ ಎನೆಲ್ಮಾರ್, ಆನಂದ ಎನೆಲ್ಮಾರ್, ವರಪ್ರಸಾದ್, ಅಖಿಲೇಶ್ ಬಜಾಲ್, ಮಧುವಂತ್, ದೀಪಕ್ ಬಜಾಲ್, ಅನ್ಸರ್ ಪೈಸಲ್ ನಗರ ಮತ್ತಿತರರು ವಹಿಸಿದ್ದರು.
ಮದರ್ ತೆರೆಜಾ ವಿಚಾರ ವೇದಿಕೆಯ ಸದಸ್ಯರಾದ ಟೋನಿ ಪಿಂಟೋ ಈ ವೇಳೆ 73ನೇ ಸಲದ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 55ಕ್ಕೂ ಮಿಕ್ಕಿ ಸದಸ್ಯರು ರಕ್ತದಾನವನ್ನು ಮಾಡಿದರು.