
ದ್ವೇಷ ಭಾಷಣಕ್ಕೆ ಅವಕಾಶ ಇರಬಾರದು: ಜಿ.ಎ. ಬಾವ
ಮಂಗಳೂರು: ದ್ವೇಷ ಭಾಷಣ ಯಾರೂ ಮಾಡಬಾರದು. ಅದಕ್ಕೆ ಅವಕಾಶನೂ ಇರಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕ್ರಮ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಕಾಂಗ್ರೆಸ್ ಮುಖಂಡ , ಮಾಜಿ ಪೊಲೀಸ್ ಅಧಿಕಾರಿ ಜಿ.ಎ. ಬಾವ ತಿಳಿಸಿದ್ದಾರೆ.
ಕಮೀಷನರ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ನಿಯೋಗ ಸಚಿವರ ಜೊತೆ ಮಾತನಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ನಾಯಕರ ರಾಜೀನಾಮೆ ಅದು ಅವರ ಆ ಕ್ಷಣದ ಆಕ್ರೋಶ. ಅವರು ಪಕ್ಷ ಬಿಟ್ಟಿಲ್ಲ. ನಮಗೆ ಬೇಕಾಗಿದ್ದು ಶಾಂತಿ ಸುವ್ಯವಸ್ಥೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖಂಡ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಸಿದ್ಧರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ಪಕ್ಷಪಾತ ಧೋರಣೆಯಿಂದ ಇಂತಹ ಘಟನೆ ಆಗುತ್ತದೆ. ಉನ್ನತ ಅಧಿಕಾರಿಗಳು ಉತ್ತಮವಾಗಿದ್ದರೂ ಕಳೆದ ಸುಮಾರು 20 ವರ್ಷಗಳಿಂದ ಒಂದೇ ಪೊಲೀಸ್ ಠಾಣೆಯಲ್ಲಿ ಇರುವ ಕೆಳ ಅಧಿಕಾರಿಗಳ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಅದಕ್ಕೆ ಪೂರಕವಾಗಿ ಸರಕಾರ ಕೆಲಸ ಮಾಡುವ ವಿಶ್ವಾಸ ಇದೆ ಎಂದರು.
ಅಲ್ಪಸಂಖ್ಯಾತರಿಗೆ ತೊಂದರೆ, ಅನ್ಯಾಯ ಆದಾಗ ನ್ಯಾಯ ಸಿಗುತ್ತದೆ ಎನ್ನುವ ಕಾರಣಕ್ಕೆ ವಿಶ್ವಾಸದಿಂದ ಬಹುತೇಕ ಮುಸ್ಲಿಮರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ. ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಆಗಿದೆ. ಸಿಎಂ ಸಿದ್ದರಾಮಯ್ಯ ಮೇಲೆ ವಿಶ್ವಾಸ ಇದೆ ಎಂದು ಹೇಳಿದರು.
ಕಣಚೂರು ಮೋನು, ಮೊಹಮ್ಮದ್ ಮೋನು ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.